ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರಕ್ಕೆ ಡಾ.ರಫೀಕ್ ಅಹಮದ್ ಅವರಿಗೆ ಟಿಕೆಟ್ ನೀಡುವುದು ನೂರಕ್ಕೆ ನೂರರಷ್ಟು ಖಚಿತವಾಗಿದೆ ಎಂದು ಮಾಜಿ ಶಾಸಕ ಷಫಿ ಅಹಮದ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ.ರಫೀಕ್ ಅಹಮದ್ ಅವರಿಗೆ ಟಿಕೆಟ್ ಕೊಡುವುದಾಗಿ ಪಕ್ಷದ ವರಿಷ್ಟರು ಮತ್ತು ಹೈಕಮಾಂಡ್ ನಾಯಕರು ಭರವಸೆ ನೀಡಿದ್ದಾರೆ. ರಫೀಕ್ ಸ್ಪರ್ಧಿಸದಿದ್ದರೆ ಬೇರೆಯವರಿಗೆ ಟಿಕೆಟ್ ನೀಡುತ್ತೇವೆ ಎಂದು ತಿಳಿಸಿದ್ದಾರೆ ಎಂದರು.
ಡಾ.ರಫೀಕ್ ಅಹಮದ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನೂರಕ್ಕೆ ನೂರರಷ್ಟು ಖಚಿತ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅಟ್ಟಿಕಾ ಬಾಬು ತುಮಕೂರಿನಲ್ಲಿ ಪ್ರಚಾರ ಮಾಡುತ್ತಿರುವುದರಿಂದ ನಗರದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆಯುವುದಾಗಿ ಷಫಿ ಅಹಮದ್ ತಿಳಿಸಿದರು.
ನಿನ್ನೆ ಮೊನ್ನೆಯಿಂದ ಅಟ್ಟಿಕಾ ಬಾಬು ಅವರು ನನ್ನ ಭಾವಚಿತ್ರವನ್ನು ಕಿಟ್ ಗೆ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಪಕ್ಷದಿಂದ ಯಾರೇ ಭಾವಚಿತ್ರವನ್ನು ಹಾಕಿಕೊಂಡರೂ ಪರವಾಗಿಲ್ಲ. ಯಾರಿಗೆ ಟಿಕೆಟ್ ನೀಡುತ್ತಾರೋ ಅವರು ಭಾವಚಿತ್ರ ಹಾಕಿಕೊಂಡರೆ ತೊಂದರೆಯಿಲ್ಲ. ಟಿಕೆಟ್ ದೊರೆಯದೆ ನನ್ನ ಭಾವಚಿತ್ರವನ್ನು ಹಾಕಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಅಟ್ಟಿಕಾ ಬಾಬು ನನ್ನ ಭಾವಚಿತ್ರ ಹಾಕಿಕೊಳ್ಳಲು ಅನುಮತಿ ನೀಡಿಲ್ಲ. ನನ್ನ ಭಾವಚಿತ್ರವನ್ನ ಹಾಕಿಕೊಳ್ಳಬೇಡ ಎಂದು ಅಟ್ಟಿಕಾ ಬಾಬು ಅವರಿಗೆ ಹೇಳಿದ್ದೇನೆ. ಆದರೂ ಅವರು ನಗರದ ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆಯುತ್ತೇನೆ ಎಂದರು.
ತುಮಕೂರು ಕ್ಷೇತ್ರಕ್ಕೆ 8 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ಸಿಗಬಹುದು. ಆದರೆ ನಾವು ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳಲು ನಿರ್ಣಯ ತೆಗೆದುಕೊಂಡಿದ್ದೇವೆ. ಹಾಗಾಗಿ ಪಕ್ಷದ ತೀರ್ಮಾನಕ್ಕೆ ಬದ್ದರಾಗಿದ್ದೇವೆ ಎಂದು ತಿಳಿಸಿದರು.