ಕ್ವಿಂಟಾಲ್ ಕೊಬ್ಬರಿಗೆ 20 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಬೇಕು ಇಲ್ಲದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 5 ಸಾವಿರ ರೂಪಾಯಿ ಸಹಾಯಧನ ನೀಡಬೇಕು. ಕೊಬ್ಬರಿ ಖರೀದಿಸಿದ 72 ಗಂಟೆಯೊಳಗೆ ರೈತರ ಖಾತೆಗೆ ಹಣ ವರ್ಗಾಯಿಸಬೇಕು. ಇಲ್ಲದಿದ್ದರೆ ತಿಂಗಳಿಗ ಕನಿಷ್ಠ ಶೇ.5ರಂದು ಬಡ್ಡಿಯ ಜೊತೆಗೆ ಮೂರು ತಿಂಗಳ ಒಳಗೆ ರೈತರಿಗೆ ಹಣವನ್ನು ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಕೊಬ್ಬರಿ ಖರೀದಿ ಮಾಡುವಾಗ ಗರಿಷ್ಠ ಖರೀದಿ ನಿಯಮವನ್ನು ಕೈಬಿಡಬೇಕು. ರೈತರು ಬೆಳೆದು ತಂದ ಉತ್ಪನ್ನವನ್ನು ಸಂಪೂರ್ಣ ಖರೀದಿ ಮಾಡಿಕೊಳ್ಳಬೇಕು. ರೈತರು ಬೆಳೆದ ಬೆಳೆಗಳನ್ನು ಬೆಳೆ ಸಮೀಕ್ಷೆಯಲ್ಲಿ ಲೋಪವಾಗದಂತೆ ರೈತರ ಉಪಸ್ಥಿತಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಕೊಬ್ಬರಿ ಬೆಲೆ 9500 ರೂ ಇದೆ. ಕೊಬ್ಬರಿ ಬೆಲೆ ಹೆಚ್ಚಿಸುವಂತೆ ರೈತರು ಆಗ್ರಹಿಸಿದ್ದರೂ ಸರ್ಕಾರಗಳು ದಿಟ್ಟ ಮತ್ತ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿವೆ. ಕಾರ್ಪೋರೇಟ್ ಕಂಪನಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುವ ಸರ್ಕಾರ ರೈತರ ಬಗ್ಗೆ ಕಿಂಚಿತ್ತೂ ಮಾನವೀಯತೆ ತೋರದೆ ಕೊಬ್ಬರಿ ಬೆಲೆಯನ್ನು 11,750ಕ್ಕೆ ನಿಗದಿ ಮಾಡಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.
ಹವಾಮಾನ ವೈಪರೀತ್ಯದಿಂದಾಗಿ ಕೊಬ್ಬರಿಯಾಗಲು 15 ತಿಂಗಳು ಸಮಯ ತೆಗೆದುಕೊಳ್ಳುತ್ತಿದೆ. ಹೀಗಾಗಿ ರೈತರು ಹಸಿ ಕೊಬ್ಬರಿಯನ್ನೇ ಮಾರುಕಟ್ಟೆಗೆ ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ರೈತರು ಕೊಬ್ಬರಿಯನ್ನು ಕಡಿಮೆ ಬೆಲೆಗೆ ಮಾರುವಂತೆ ಆಗಿದೆ. ಹಾಗಾಗಿ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಲೆ ಏರಿಕೆ ಮಾಡಬೇಕು ಎಂದರು.