ಪ್ರತಿಪಕ್ಷಗಳ ಸದಸ್ಯರನ್ನು ಹಣಿಯಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ 8 ಪ್ರತಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನ್ಯಾಷನಲ್ಕ ಕಾನ್ಫರೆನ್ಸ್ ನ ಫಾರೂಕ್ ಅಬ್ದುಲ್ಲಾ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯ ಉದ್ದವ್ ಠಾಕ್ರೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಪ್ರಧಾನಿಗೆ ಬರೆದಿರುವ ಪತ್ರಕ್ಕೆ ಸಹಿ ಹಾಕಿದ್ದಾರೆ.
ಭಾರತ ಈಗಲೂ ಪ್ರಜಾಸತ್ತಾತ್ಮಕ ದೇಶ ಎಂದು ನೀವು ಒಪ್ಪುತ್ತೀರಿ ಎಂದು ನಾವು ಭಾವಿಸುತ್ತೇವೆ. ಪ್ರತಿಪಕ್ಷಗಳ ಸದಸ್ಯರ ವಿರುದ್ಧ ಕೇಂದ್ರೀಯ ಸಂಸ್ಥೆಗಳ ಅಸ್ಪಷ್ಟ ದುರ್ಬಳಕೆಯು ನಾವು ಪ್ರಜಾಪ್ರಭುತ್ವದಿಂದ ನಿರಂಕುಶಪ್ರಭುತ್ವಕ್ಕೆ ಪರಿವರ್ತನೆಯಾಗಿದ್ದೇವೆ ಎಂಬುದನ್ನು ಸೂಚಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
2014ರಿಂದ ನಿಮ್ಮ ಆಡಳಿತದಡಿಯಲ್ಲಿ ತನಿಖಾ ಸಂಸ್ಥೆಗಳು ಬಂಧಿಸಿದ, ದಾಳಿ ಮಾಡಿದ, ವಿಚಾರಣೆಗೆ ಒಳಗಾದ ಪ್ರಮುಖ ರಾಜಕಾರಣಿಗಳ ಪೈಕಿ ಗರಿಷ್ಠ ರಾಜಕಾರಣಿಗಳು ವಿವಿಧ ಪ್ರತಿಪಕ್ಷಗಳಿಗೆ ಸೇರಿದವರಾಗಿದ್ದಾರೆ. ಬಿಜೆಪಿಗೆ ಸೇರುವ ಪ್ರತಿಪಕ್ಷಗಳ ರಾಜಕಾರಣಿಗಳ ವಿರುದ್ಧದ ಪ್ರಕರಣಗಳ ಬಗ್ಗೆ ತನಿಖಾ ಸಂಸ್ಥೆಗಳು ನಿರಾಸಕ್ತಿ ವಹಿಸಿರುತ್ತವೆ ಎಂದು ಪತ್ರದಲ್ಲಿ ಅಸಮಾಧಾನ ಹೊರಹಾಕಲಾಗಿದೆ.


