ವಿಜಯ ಸಂಕಲ್ಪ ಯಾತ್ರೆಗೆ ಬಂದ ಜನರಿಗೆ ಹಣ ಕೊಡದ ಹಿನ್ನೆಲೆಯಲ್ಲಿ ಬಿಜೆಪಿ ಬಾವುಟಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್ ನಗರದಲ್ಲಿ ನಡೆದಿದೆ.
ಕೆ.ಆರ್ ನಗರದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನೇತೃತ್ವದ ವಿಜಯ ಸಂಕಲ್ಪ ಯಾತ್ರೆ ನಡೆದಿತ್ತು. ಯಾತ್ರೆಯಲ್ಲಿ ಮಾಜಿ ಸಿಎಂ ಸದಾನಂದ ಗೌಡ ಸೇರಿದಂತೆ ಕೆ.ಆರ್ ನಗರ ತಾಲೂಕಿನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ರೋಡ್ ಶೋನಲ್ಲಿ ಭಾಗಿಯಾಗಿದ್ದರು.
ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಬಿಜೆಪಿ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದರು. ಯಾತ್ರೆಗೆ ಬಂದ ಜನರಿಗೆ ಹಣ ಕೊಡುವುದಾಗಿ ಭರವಸೆ ನೀಡಿದ ಆಯೋಜಕರು ಹಣ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಕಾರ್ಯಕ್ರಮಕ್ಕೆ ಬಂದವರು ಬಿಜೆಪಿ ಬಾವುಟಗಳಿಗೆ ಬೆಂಕಿ ಹಚ್ಚಿದ್ದಾರೆ.
80 ಬೈಕ್‌ಗಳಿಗೆ ಪೆಟ್ರೋಲ್‌ಗೆ ದುಡ್ಡು ಕೊಡಲಿಲ್ಲ ಎಂದು ಕಿಡಿಕಾರಿದ ಕಾರ್ಯಕರ್ತರು ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡರ ವಿರುದ್ಧ ಅಸಮಾಧಾನ ಹೊರಹಾಕಿದರು ಎಂದು ಸುದ್ದಿ ಟಿವಿ ಫೇಸ್ಬುಕ್ ವಾಲ್ ನಲ್ಲಿ ಬರೆಯಲಾಗಿದೆ.
ಜನರ ಅಕ್ರೋಶಕ್ಕೆ ತತ್ತರಿಸಿದ ಕೆ.ಆರ್ ನಗರದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್, ಚಿನ್ನ ಗಿರವಿಯಿಟ್ಟು ಕಾರ್ಯಕರ್ತರಿಗೆ ಹಣ ನೀಡಿದರು ಎಂದು ಹೇಳಲಾಗಿದೆ.


