ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ಬೇರೆ ಬೇರೆ ಕಡೆ ವಿಸಿ ನಾಲೆಗೆ ಎಸೆದಿರುವ ಘಟನೆ ಮಂಡ್ಯ ಜಿಲ್ಲೆಯ ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಡ್ಯದ ವಿಶ್ವೇಶ್ವರಯ್ಯ ನಾಲೆಯಲ್ಲಿ ಮೃತದೇಹದ ತುಂಡುಗಳನ್ನು ಎಸೆದಿದ್ದು, ತಾಲೂಕಿನ ಹೊಡಾಘಟ್ಟ, ಶಿವಾರ, ಡಣಾಯಕನಪುರ ಹಾಗೂ ಮದ್ದೂರು ತಾಲೂಕಿನ ಗೂಳೂರಿನಲ್ಲಿ ಮೃತದೇಹದ ಭಾಗಗಳು ದೊರೆತಿವೆ ಎಂದು ಹೇಳಲಾಗಿದೆ.
ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಲೆಗೈದು ಈ ನಾಲೆಗೆ ಎಸೆದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಹೊಡಾಘಟ್ಟ ಬಳಿ ಮೃತ ವ್ಯಕ್ತಿಯ ತೊಡೆ ಮತ್ತು ಸೊಂಟದ ಭಾಗ ಪತ್ತೆಯಾದರೆ, ಶಿವಾರದ ಸಮೀಪ ಒಂದು ಕಾಲು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಡಣಾಯಕನಪುರ ಬಳಿ ಎರಡು ಕೈ, ಒಂದು ಕಾಲು ಕಂಡು ಬಂದರೆ, ಗೂಳೂರು ಬಳಿ ತಲೆಯ ಭಾಗ ಪತ್ತೆಯಾಗಿದೆ. ಮೃತ ವ್ಯಕ್ತಿಯ ಎಡಗೈ ಮೇಲೆ ಕಾವ್ಯ, ರಘು ಎಂದು ಹಚ್ಚೆ ಕಂಡು ಬಂದಿದ್ದು ಬಲಗೈಯಲ್ಲಿ ವನಜಾ ಎಂದು ಹಚ್ಚೆ ಗುರುತು ಇದೆ ಸುದ್ಧಿ ಟಿವಿ ಫೇಸ್ಬುಕ್ ಪೇಜಿನಲ್ಲಿ ಬರೆಯಲಾಗಿದೆ.
ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಮೃತದೇಹದ ಭಾಗಗಳನ್ನು ಸಂಗ್ರಹಿಸಿ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸ್ಪಿ ಎನ್.ಯತೀಶ್, ತನಿಖೆಗೆ ಪ್ರತ್ಯೇಕ ತಂಡ ರಚನೆಯ ಬಗ್ಗೆ ಚಿಂತನೆ ನಡೆಸಿದ್ದಾರೆ. ಮೃತದೇಹದ ಗುರುತು ಪತ್ತೆಗೆ ಮುಂದಾಗಿರುವ ಪೊಲೀಸರು ಸಮೀಪದ ಪೊಲೀಸ್ ಠಾಣೆಗಳಿಂದ ನಾಪತ್ತೆ ಪ್ರಕರಣಗಳ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.