ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟು ಎಎಪಿ ಬೆಂಬಲಿಸುವಂತೆ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಜಾಫರ್ ಮೊಹಿನುದ್ದೀನ್ ಕರೆ ನೀಡಿದ್ದಾರೆ.
ತುಮಕೂರಿನ ಎಎಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪಕ್ಷದ ಕೆಲಸ ಕಾರ್ಯಗಳ ಬಗ್ಗೆ ವಿದ್ಯಾವಂತರಿಗೆ ತಿಳಿದಿದೆ. ಇದುವರೆಗೂ ಪ್ರಾದೇಶಿಕ ಪಕ್ಷವಾಗಿದ್ದ ನಮ್ಮ ಪಕ್ಷ ಇಂದು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಮುಂದಿನ ದಿನದಲ್ಲಿ ದೇಶಾದ್ಯಂತ ಅಮ್ ಆದ್ಮಿ ಪಕ್ಷ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ತುಮಕೂರಿನ ಸಮಾಜ ಸೇವಕ ಹಾಗೂ ಯುವ ಮುಖಂಡ ಅಜ್ಮಲ್ ಪಾಷ ಪಕ್ಷಕ್ಕೆ ಸೇರ್ಪಡೆ ಆಗಿರುವುದು ಸಂತಸದ ಸಂಗತಿ ಇಷ್ಟೊಂದು ಕಾರ್ಯಕರ್ತರ ಸಮ್ಮುಖದಲ್ಲಿ ಸೇರ್ಪಡೆ ಆಗಿರುವುದು ಪಕ್ಷಕ್ಕೆ ಬಲಬಂದಂತಾಗಿದೆ. ಸದ್ಯದಲ್ಲಿ ತೀರ್ಮಾನ ತೆಗೆದುಕೊಂಡು ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುವುದು ಎಂದರು.
ಮುಖಂಡ ಸೈಯದ್ ಅಜ್ಮಲ್ ಪಾಷ ಮಾತನಾಡಿ ಜನರ ತೆರಿಗೆ ಜನರ ಸೇವೆಗೆ ಎಂದಿರುವ ಎಎಪಿ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ನಾನು ಅಭ್ಯರ್ಥಿಯಾದರೆ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಪಕ್ಷದ ಸಂಘಟನೆ ಮಾಡುತ್ತೇನೆ ಜನರ ಮನೆ ಮನೆಗಳಿಗೆ ಹೋಗಿ ಪಕ್ಷದ ಕೆಲಸ ಕಾರ್ಯಗಳ ಬಗ್ಗೆ ತಿಳಿಸುತ್ತೇನೆ ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಗೌಡರು ಮಾತನಾಡಿ, ಆಮ್ ಆದ್ಮಿ ಪಕ್ಷದ ಸಾಧನೆ ಬಹಳಷ್ಟು ಇದ್ದು ಕಾರ್ಯವೈಖರಿ ಬೇರೆ ಪಕ್ಷಗಳಿಗೆ ಮಾದರಿಯಾಗಬೇಕು ಎಂದರು.