ಇ ಶ್ರಮ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ನೋಂದಣಿ ಅಭಿಯಾನವನ್ನು ಸ್ಲಂಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿ ತುಮಕೂರು ಜಿಲ್ಲಾ ಸ್ಲಂ ಸಮಿತಿ ನಿಯೋಗ ಕಾರ್ಮಿಕ ಇಲಾಖೆಯ ನಿರೀಕ್ಷಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.
ನಿಯೋಗದಲ್ಲಿದ್ದ ಸ್ಲಂ ಸಮಿತಿ ಕಾರ್ಯದರ್ಶಿ ಅರುಣ್ ಮಾತನಾಡಿ, ಸ್ಲಂ ನಿವಾಸಿಗಳು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಜನ ತುಮಕೂರು ಜಿಲ್ಲೆಯಲ್ಲಿದ್ದಾರೆ ಎಂದರು.
ಅಘೋಷಿತ ಮತ್ತು ಘೋಷಿತ ಕೊಳಚೆ ಪ್ರದೇಶಗಳಲ್ಲಿ ನಗರ ಅತಿ ಹೆಚ್ಚು ಶ್ರೀಮಂತರ ಮನೆಗಳಲ್ಲಿ ಮಹಿಳೆಯರು ಮನೆಕೆಲಸ, ಚೌಲ್ಟ್ರಿ ಸಹಾಯಕರ ಕೆಲಸ, ಪೈಂಟಲಸ್, ಟೈಲರಿಂಗ್ ಬೀದಿಬದಿ ವ್ಯಾಪಾರಿಗಳಾಗಿ ತೊಡಗಿಸಿಕೊಂಡಿರುವ ಜನರಿಗೆ ಕಾರ್ಮಿಕ ಇಲಾಖೆಯ ಸವಲತ್ತುಗಳು ಸಿಗಬೇಕು ಎಂದು ಆಗ್ರಹಿಸಿದರು.
ಮನವಿ ಸ್ವಿಕರಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿ ವೆಂಕಟೇಶ್ ಬಾಬು ಸ್ಲಂ ಜನರ ನೋಂದಣಿ ಬೇಡಿಕೆ ಸಂವಿಧಾನ ಬದ್ದವಾಗಿದೆ, ಹೀಗಾಗಿ ತುರ್ತು 5 ಸ್ಲಂಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡುತ್ತೇವೆ. ಇಲಾಖೆಯ ಸಿಬ್ಬಂದಿಯೊಂದಿಗೆ ಭೇಟಿ ಮಾಡಿ ಸ್ಲಂನಲ್ಲಿ ವಾಸಿಸುವ ಎಲ್ಲಾ ಬಡವರಿಗೂ ಇಲಾಖೆಯಿಂದ ಉಚಿತವಾಗಿ ಇ-ಶ್ರಮ ಮತ್ತು ಇತರೆ ನಿರ್ಮಾಣ ವಲಯದ ಕಾರ್ಮಿಕರಿಗೆ ನೋಂದಣಿ ಮಾಡಿಸುವ ಕೆಲಸ ಮಾಡುತ್ತೇವೆ ಎಂದರು.
ನಿಯೋಗದಲ್ಲಿ ತಿರುಮಲಯ್ಯ, ಗಣೇಶ್, ಮಂಜುನಾಥ್ ನವೀನ ಕುಮಾರಿ, ಲಕ್ಷ್ಮಮ್ಮ, ಲಕ್ಷ್ಮೀಪತಿ, ಮಹೇಶ್, ಸುಬ್ರಮಣಿ, ಮೋಹನ್ ಇತರರು ಇದ್ದರು.