ಕಾಲುಬಾಯಿ ರೋಗ ಮತ್ತು ಇತರೆ ಕಾಯಿಲೆಗಳಿಂದ ಮೃತಪಟ್ಟ ಜಾನುವಾರುಗಳಿಗೆ ನೀಡುತ್ತಿರುವ ಪರಿಹಾರ ಧನವನ್ನು 50 ಸಾವಿರ ರೂಪಾಯಿಗಳಿಗೆ ಹೆಚ್ಚಿಸಬೇಕೆಂದು ಜೆಡಿಎಸ್ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಬಜೆಟ್ ಅಧಿವೇಶನ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಲುಬಾಯಿ ರೋಗ ಮತ್ತು ಇತರೆ ಕಾಯಿಲೆಗಳಿಂದ ಮೃತಪಟ್ಟ ಜಾನುವಾರುಗಳಿಗೆ ಸರ್ಕಾರ ನೀಡಿದ ಉತ್ತರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ಬೀದರ್ ಜಿಲ್ಲೆಯಲ್ಲಿ 108, ಬೀದರ್ ದಕ್ಷಿಣ ಕ್ಷೇತ್ರದಲ್ಲಿ 4 ಜಾನುವಾರುಗಳು ಮೃತಪಟ್ಟಿವೆ ಎಂದು ಸಚಿವರು ಉತ್ತರ ನೀಡಿದ್ದಾರೆ. ವಾಸ್ತವವಾಗಿ ನೋಡಿದರೆ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಜಾನುವಾರುಗಳು ಮೃತಪಟ್ಟಿವೆ ಎಂದು ಹೇಳಿದರು.
ಮೃತ ಕರುವಿಗೆ 5 ಸಾವಿರ ರೂ., ದೊಡ್ಡ ಜಾನುವಾರುಗಳಿಗೆ 20 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಒಂದು ಹಸು 1 ಲಕ್ಷ ರೂ.ಗಿಂತ ಕಡಿಮೆ ಮೊತ್ತಕ್ಕೆ ಸಿಗುವುದಿಲ್ಲ. ರೈತಪರ, ಬಡವರ ಪರವಾದ ಸರ್ಕಾರ ಅಂದ್ರೆ ಇದೇನಾ..? ಎಂದು ಪ್ರಶ್ನಿಸಿದರು.
ಸರ್ಕಾರ ನೀಡುತ್ತಿರುವ ಪರಿಹಾರದ ಮೊತ್ತವನ್ನು ಕನಿಷ್ಟ 50 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಈಗ ನೀಡುತ್ತಿರುವ ಪರಿಹಾರ ನ್ಯಾಯಯುತವಾದದ್ದಲ್ಲ ಎಂದು ಶಾಸಕರು ಒತ್ತಾಯಿಸಿದರು.
ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕ ವೆಂಕಟರಾವ್ ನಾಡಗೌಡರು ಸೇರಿ ಹಲವರು ಬಂಡೆಪ್ಪ ಖಾಶೆಂಪುರ್ ಅವರ ಮಾತಿಗೆ ಧ್ವನಿ ಗೂಡಿಸಿದರು.


