Friday, January 30, 2026
Google search engine
Homeಮುಖಪುಟರಂಗಕರ್ಮಿ ಕಪ್ಪಣ್ಣಗೆ 75 - ನಮ್ಮ ನಡುವಿನ ಸಾಂಸ್ಕೃತಿಕ ಶಕ್ತಿ ಎಂದ ಪುರುಷೋತ್ತಮ ಬಿಳಿಮಲೆ

ರಂಗಕರ್ಮಿ ಕಪ್ಪಣ್ಣಗೆ 75 – ನಮ್ಮ ನಡುವಿನ ಸಾಂಸ್ಕೃತಿಕ ಶಕ್ತಿ ಎಂದ ಪುರುಷೋತ್ತಮ ಬಿಳಿಮಲೆ

ʼಕಪ್ಪಣ್ಣʼ ಎಂದೇ ಜನಪ್ರಿಯವಾಗಿರುವ ಶ್ರೀನಿವಾಸ್‌ ಜಿ ಕಪ್ಪಣ್ಣನವರಿಗೆ 75 ತುಂಬಿತಂತೆ! ನನಗೆ ಕಪ್ಪಣ್ಣನವರನ್ನು ಬಹಳ ನಿಕಟವಾಗಿ ಗೊತ್ತಿಲ್ಲದಿದ್ರೂ ಅವರ ಬಗ್ಗೆ ಸುಮಾರು 40 ವರ್ಷಗಳಿಂದ ಆದರದ ಮಾತುಗಳನ್ನು ಕೇಳುತ್ತಲೇ ಬಂದಿದ್ದೇನೆ. ರಂಗಸ್ಥಳದ ಮೇಲೆ ಮತ್ತು ರಂಗಸ್ಥಳದ ಹಿಂದೆ ನಿಂತು ದಣಿವರಿಯದೆ ಅವರು ಕೆಲಸ ಮಾಡುವುದನ್ನೂ ಕೆಲವು ಬಾರಿ ಕಂಡಿದ್ದೇನೆ. ದೆಹಲಿಯ ಜೆ ಎನ್‌ ಯು ಕನ್ನಡ ಪೀಠಕ್ಕೆ ಅವರು ಅತಿಥಿಯಾಗಿ ಆಗಮಿಸಿದ್ದೂ ಉಂಟು.

ಬಹಳ ಜನ ಭಾವಿಸಿದಂತೆ, ಕಪ್ಪಣ್ಣ ಕೇವಲ ಸಂಘಟಕ ಅಥವಾ ಸಾಂಸ್ಕೃತಿಕ ರಾಯಭಾರಿ ಅಲ್ಲ. ಅವರದು ಅದನ್ನೂ ಮೀರಿದ ಸೃಜನಶೀಲ ಪ್ರತಿಭೆ. ಒಳ್ಳೆಯದು ಮತ್ತು ಕೆಟ್ಟದ್ದರ ನಡುವಣ ವ್ಯತ್ಯಾಸಗಳೇ ಕಾಣೆಯಾಗುತ್ತಿರುವಾಗ ಅತ್ಯುತ್ತಮವಾದುದನ್ನು ಆಯ್ದುಕೊಳ್ಳುವ, ಅದರ ಪರವಾಗಿ ವಾದ ಮಂಡಿಸುವ ಮತ್ತು ಅದಕ್ಕೆ ಸೂಕ್ತ ಮನ್ನಣೆ ದೊರೆಯುವಂತೆ ಮಾಡುವ ವಿಶಿಷ್ಟ ಪ್ರತಿಭೆ ಅವರಲ್ಲಿತ್ತು. ಬಹುಶ: ಈ ಗುಣ ಅವರಲ್ಲಿ ಗಾಢವಾಗಿ ಬೆಳೆಯಲು ಅವರ ಗುರುಗಳಾದ ಡಾ. ಹೆಚ್. ನರಸಿಂಹಯ್ಯನವರು ಕಾರಣವಾಗಿದ್ದರೂ ಆಗಿರಬಹುದು.

ರಂಗದ ಬೆಳಕು, ವಿನ್ಯಾಸ, ಕಲಾವಿದರ ಉಸ್ತುವಾರಿ ಇತ್ಯಾದಿಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುವ ಕಪ್ಪಣ್ಣ ಅವರ ಹೆಸರಿನ ಹಾಗೇ ರಂಗದ ಹಿಂದಿನ ಕತ್ತಲಲ್ಲಿಯೇ ಉಳಿದು ನೋಡುಗರಿಗೆ ಬೆಳಕಾದರು. ಜನಪದ ಕಲೆಗಳ ಪ್ರದರ್ಶನಕ್ಕೆ ಕಾಯಕಲ್ಪ ನೀಡಿದರು. ಅವರ ಪ್ರಯತ್ನದಿಂದಾಗಿ ಇವತ್ತು ಕರ್ನಾಟಕದ ಯಾವುದೇ ಜನಪದ ಕಲೆಯನ್ನು ರಾಷ್ಟ್ರೀಯ ಮಟ್ಟದಲ್ಲಾಗಲೀ ಅಂತಾರಾಷ್ಟ್ರೀಯ ಮಟ್ಟದಲ್ಲಿಯಾಗಲೀ ಪ್ರದರ್ಶಿಸಲು ಸಾಧ್ಯವಿದೆ. ಇದು ಬರೇ ಸಂಘಟನೆಯ ಶಕ್ತಿ ಅಲ್ಲ, ಬದಲು ಕಲೆಯ ಸತ್ವವನ್ನು ಅರಿತು, ಅದು ಹಾಳಾಗದ ಎಚ್ಚರ ವಹಿಸಿ, ಅದನ್ನು ಆಧುನಿಕ ಪ್ರೇಕ್ಷಕರಿಗೆ ದಾಟಿಸುವ ಮಹತ್ವದ ಕೆಲಸ. ಶಿವರಾಮ ಕಾರಂತರೂ ಇದನ್ನೇ ಮಾಡಿದರು.

ಕರ್ನಾಟಕ ಸಂಸ್ಕೃತಿಯನ್ನು ಕರ್ನಾಟಕದ ಹೊರಗಡೆಗೆ ಪಸರಿಸಿದ ಅತ್ಯಂತ ಮುಖ್ಯ ಕೆಲಸವನ್ನು ಕಪ್ಪಣ್ಣ ಮಾಡಿದ್ದಾರೆ. ಪ್ರತಿವರ್ಷ ದೆಹಲಿಯ ಪ್ರಗತಿ ಮೈದಾನದಲ್ಲಿ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ನಡೆಯುತ್ತಿದ್ದಾಗ ಕಪ್ಪಣ್ಣ ಒಳ್ಳೆಯ ಕಲಾವಿದರನ್ನು ಹುಡುಕಿ, ತರಬೇತಿ ನೀಡಿ, ದೆಹಲಿಯಲ್ಲಿ ಇತರ ರಾಜ್ಯಗಳ ಪ್ರೇಕ್ಷಕರಿಗೆ ಅಚ್ಚುಕಟ್ಟಾಗಿ ತೋರಿಸಿ ರಾಜ್ಯದ ಘನತೆಯನ್ನು ಎತ್ತಿ ಹಿಡಿಯುತ್ತಿದ್ದರು. ಹೊರನಾಡಿನ ಕನ್ನಡಿಗನಾಗಿರುವ ನನ್ನಂಥವನಿಗೆ ಅದೊಂದು ಮಧುರ ಕ್ಷಣವಾಗಿರುತ್ತಿತ್ತು. ಬಹುಶ: ಇಂಥ ಕೆಲಸವನ್ನು ಕಪ್ಪಣ್ಣ ಜಗತ್ತಿನಾದ್ಯಂತ ಮಾಡಿ ಕರ್ನಾಟಕದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಚಂದ್ರಶೇಖರ ಕಂಬಾರ, ಬಿವಿ ಕಾರಂತ, ಎಮ್. ಎಸ್. ಸತ್ಯು, ಸಿ ಆರ್‌ ಸಿಂಹ ಮೊದಲಾದವರ ನಿಕಟ ಸಂಪರ್ಕ ಹೊಂದಿರುವ ಕಪ್ಪಣ್ಣನವರಿಗೆ ರಂಗಭೂಮಿಯ ಸೂಕ್ಷ್ಮಗಳೆಲ್ಲವೂ ಗೊತ್ತು. ಹಾಗಾಗಿಯೇ ಅವರು ಎಲ್ಲಿ ನಾಟಕ ಪ್ರದರ್ಶನ ಮಾಡಿದರೂ ಅದು ಯಶಸ್ಸು ಪಡೆಯುತ್ತಿತ್ತು.

ಕಪ್ಪಣ್ಣನವರು ನಮ್ಮ ನಡುವಣ ದೊಡ್ಡ ಸಾಂಸ್ಕೃತಿಕ ಶಕ್ತಿ. ಅವರಿಗೆ ಶುಭಾಶಯಗಳು.

ಲೇಖಕರು: ಪುರುಷೋತ್ತಮ ಬಿಳಿಮಲೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular