Friday, January 30, 2026
Google search engine
Homeಮುಖಪುಟಚೇತನ್ ಅಹಿಂಸಾ ಮತ್ತು ಅಭಿಪ್ರಾಯ ಭೇದ

ಚೇತನ್ ಅಹಿಂಸಾ ಮತ್ತು ಅಭಿಪ್ರಾಯ ಭೇದ

ಫೆಬ್ರವರಿ 12ರಂದು ಸ್ಕೂಲ್ ಆಫ್ ಅಂಬೇಡ್ಕರ್ ಥಾಟ್ಸ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಚೇತನ್ ಈ ಜೈನ್ ಕಾಲೇಜಿನಲ್ಲಿ ನಡೆದ ಪ್ರಕರಣದ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಕೇಳಿದರು.

ವಿದ್ಯಾರ್ಥಿಗಳು ಸಾಮಾಜಿಕ ಸಂವೇದನೆಯೇ ಇಲ್ಲದೇ, ಮೀಸಲಾತಿ ಮತ್ತು ಪ್ರಾತಿನಿಧ್ಯಗಳ ಔಚಿತ್ಯವನ್ನು ತಿಳಿಯದೇ, ಸಾಮಾಜಿಕ ಚರಿತ್ರೆಯಲ್ಲಿ ಸಮುದಾಯಗಳನ್ನು ಶೋಷಿಸಿದರ ಬಗ್ಗೆ ತಿಳಿಯದೇ ತಮ್ಮ ಹಗುರ ಮತ್ತು ಲಘು ಧೋರಣೆಯಿಂದ ಮಾಡಿದ್ದ ಅಪಹಾಸ್ಯದ ನಾಟಕವನ್ನು ಖಂಡಿಸಿದೆ ಮತ್ತು ಇದನ್ನು ಗಮನಿಸಿಯೂ ಉಡಾಫೆಯಿಂದ ವಿದ್ಯಾರ್ಥಿಗಳನ್ನು ಈ ನಾಟಕ ಮಾಡಲು ಬಿಟ್ಟ ಶಿಕ್ಷಕರ, ಸಂಬಂಧಪಟ್ಟ ವ್ಯಕ್ತಿಗಳ ಹೊಣೆಗೇಡಿತನವನ್ನು ಖಂಡಿಸಿದೆ.

ನನ್ನ ಬೇಸರದ ಕಾರಣವೆಂದರೆ ವಿದ್ಯಾವಂತರು ಮತ್ತು ಸುಶಿಕ್ಷಿತರು ಸಾಮಾಜಿಕ ದೌರ್ಜನ್ಯದ ಪರಿವೇ ಇಲ್ಲದಂತೆ ವರ್ತಿಸಿದ್ದು! ಇದು ಸಾಮಾಜಿಕ ಆರೋಗ್ಯದ ಲಕ್ಷಣವಲ್ಲ ಎಂಬುದು ನನ್ನ ಅಭಿಪ್ರಾಯ. ಹಾಗೆಯೇ ಹಿಂದೆ ಮತ್ತು ಈಗಲೂ ಜಾತಿಯ ಕಾರಣಕ್ಕೆ ಜೀವಗಳನ್ನು ಮತ್ತು ಅವರ ಜೀವನಗಳನ್ನು ಅಪಮಾನಿಸುತ್ತಿರುವ ‘ದುರಹಂಕಾರದ ಮತ್ತು ಮಾನವ ಹಕ್ಕಿನ ಉಲ್ಲಂಘನೆಯ ಮತ್ತೊಂದು ರೀತಿಯ ಪ್ರದರ್ಶನವೇ ಈ ನಾಟಕ ಮಾಡಿರುವುದಾಗಿದೆ ಮತ್ತು ಅದನ್ನು ಮಾಡಲು ಬಿಡುವುದಾಗಿದೆ ಎಂಬುದು ನನ್ನ ಖಚಿತ ಅಭಿಪ್ರಾಯ.

ಇದನ್ನು ಕೇಳಿಸಿಕೊಂಡ ಚೇತನ್ ನನ್ನ ಅಭಿಪ್ರಾಯವನ್ನು ತಿಳಿದು ಅಲ್ಲಿಗೇ ಸುಮ್ಮನಾದರು.

ಈಗ ಚೇತನ್ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ನನ್ನ ಸ್ನೇಹಿತರು ಕೆರಳಿರುವುದು ಆಶ್ಚರ್ಯವಾಗಿದೆ.

ಅದು ಚೇತನ್ ಅಭಿಪ್ರಾಯ.

ಅದನ್ನು ನಮ್ಮ ನಮ್ಮ ತಾತ್ವಿಕ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡೋಣ.

ಆದರೆ, ಚೇತನ್ ತನ್ನ ಆಲೋಚನಾ ಧಾಟಿಯನ್ನೇ ಬದಲಿಸಿಕೊಳ್ಳಬೇಕೆನ್ನುವುದು, ಮತಿಭ್ರಮಣೆ ಆಗಿದೆ ಎನ್ನುವುದು, ಅವನಲ್ಲಿ ಸಂಘಿ ಇದ್ದಾನೆ ಎನ್ನುವುದು, ಇತರ ರೀತಿಗಳಲ್ಲಿ ವ್ಯಕ್ತಿಗತ ನಿಂದನೆ ಮಾಡುವುದು ಅಸೂಕ್ಷ್ಮತೆಯ ಮತ್ತು ಅಸಹನೆಯ ಪ್ರಕಟಣೆಗಳೇ ಆಗಿವೆ.

ಚಳವಳಿ, ಸಂಘಟನೆ ಮತ್ತು ಹೋರಾಟಗಳೆಂದರೆ “ಶ್ರೀ ಕೋದಂಡರಾಮ ಭಜನಾ ಮಂಡಳಿ” ಅಲ್ಲ. ಎಲ್ಲರೂ ಒಂದೇ ತಾಳ ಮೇಳದಲ್ಲಿ ಭಜನೆ ಮಾಡುವಂತೆ ಹೋರಾಟಗಳಲ್ಲಿ ಎಲ್ಲರೂ ಒಂದೇ ರೀತಿಯ ಆಲೋಚನೆ, ಒಂದೇ ಧೋರಣೆ, ಒಂದೇ ಮಾದರಿಯ ಸಿದ್ಧ ಆಯಾಮಗಳನ್ನು ಹೊಂದಿರಲು ಸಾಧ್ಯ ಇಲ್ಲ. ಹೊಂದಿರುವ ಪ್ರಾಥಮಿಕ ಆಶಯ, ಉದ್ದೇಶಗಳನ್ನು ಗಮನಿಸಬೇಕಲ್ಲದೇ ವ್ಯಕ್ತಿಗತವಾಗಿ ಹೀಗೆಳೆಯುವುದರ ಔಚಿತ್ಯವನ್ನು ಪ್ರಶ್ನಿಸುತ್ತೇನೆ.

ಚೇತನ್ ಮಾತಿಗೆ ನನ್ನ ಸಹಮತವಿಲ್ಲದಿದ್ದರೂ ಅವರ ಮಾತನ್ನು ಕೇಳುವಷ್ಟು ಸಹನೆ ಮತ್ತು ಅದಕ್ಕೆ ವೈಚಾರಿಕವಾಗಿಯೇ ಉತ್ತರಿಸುವ ನಿಲುವು ನನ್ನದು.

ಭಿನ್ನಾಭಿಪ್ರಾಯಗಳನ್ನು, ಭಿನ್ನ ಧೋರಣೆಗಳನ್ನು, ಭಿನ್ನ ಅಭಿವ್ಯಕ್ತಿಯ ರೀತಿಗಳನ್ನು ಹೊಂದಿದ್ದು ಸಮಸಮಾಜದ ಮತ್ತು ಸಮಾನಗೌರವದ ಆಶಯವನ್ನು ಹೊಂದಿದ್ದ ಭಿನ್ನ ನೆಲೆಗಳ ವ್ಯಕ್ತಿಗಳು ಶರಣರಾಗಿ ಅನುಭವ ಮಂಟಪವೆಂಬ ಒಂದೇ ವೈಚಾರಿಕ ಸೂರಿನಡಿ ವಚನ ಚಳುವಳಿ ಮತ್ತು ಪರ್ಯಾಯ ಸಂಸ್ಕೃತಿ ಕಟ್ಟಿರುವ ಉದಾಹರಣೆ ನಮ್ಮ ಕನ್ನಡದ ನಾಡಿಗಿದೆ.

ಇನ್ನು ಚೇತನ್ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ನಾನು ಹೇಳುವುದೇನೆಂದರೆ,

“ಹಾಸ್ಯಕ್ಕೂ ಅಪಹಾಸ್ಯಕ್ಕೂ ಮತ್ತು ವಿಡಂಬನೆಗೂ ಅವಹೇಳನಕ್ಕೂ ವ್ಯತ್ಯಾಸ ಇದೆ. ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಸೂಕ್ಷ್ಮತೆಯ ಬಗ್ಗೆ ಅತೀವ ಕಾಳಜಿಯನ್ನು ಹೊಂದಿರಬೇಕು. ಹಿಜಾಬ್ ತೊಟ್ಟ ಹೆಣ್ಣು ಮಕ್ಕಳ ಪ್ರವೇಶ ತಡೆದು ಗೇಟ್ ಹಾಕಿದಂತಹ ಅಸಹನೆ ಮತ್ತು ಅಸೂಕ್ಷ್ಮತೆಯೇ ಇಲ್ಲಿಯೂ ನನಗೆ ಕಂಡಿದ್ದು. ಸಾಮಾಜಿಕ ಹೊಣೆಗೇಡಿತನದ ಮತ್ತೊಂದು ಮುಖವಷ್ಟೇ!”

ಜೈನ್ ಕಾಲೇಜಿನಲ್ಲಿ ನಡೆದ ಪ್ರಕರಣವನ್ನು ಖಂಡಿಸುವಂತೆಯೇ ಚೇತನ್ ಮೇಲೆ ವ್ಯಕ್ತಿ ಕೇಂದ್ರಿತವಾಗಿ ನಡೆಯುವ ವಾಗ್ದಾಳಿಯನ್ನೂ ಖಂಡಿಸುತ್ತೇನೆ.

ಇನ್ನೊಂದು ವಿಷಯ; ಯಾರೇ ಬಾಬಾ ಸಾಹೇಬ್ ಅಂಬೇಡ್ಕರರಂತಹ ಮಹಾನ್ ಚೇತನಗಳನ್ನು ಅನುಮಾನಿಸುವುದೆಂದರೆ ಆಕಾಶಕ್ಕೆ ಉಗುಳಿದಂತೆ. ಅಪಹಾಸ್ಯ ಮಾಡಿದವರ ವಿಕ್ಷಿಪ್ತ ಮನಸ್ಥಿತಿಯ ಅನಾವರಣವಾಗುವುದು. ಅಂತೆಯೇ ದಲಿತರ ಬಗ್ಗೆ, ಮೀಸಲಾತಿ, ಪ್ರಾತಿನಿಧ್ಯಗಳನ್ನು ಆಡಿಕೊಳ್ಳುವುದು ಮತ್ತು ಲೇವಡಿ ಮಾಡುವುದು ಆಯಾ ವ್ಯಕ್ತಿಗಳ ಅಸಹನೆ, ಅಹಂಕಾರ ಮತ್ತು ಸಾಮಾಜಿಕ ಅಸೂಕ್ಷ್ಮತೆಯ ಅನಾವರಣವಾಗುವುದು. ಈ ವಿಷಯದಲ್ಲಿ ನನಗೆ ತೀವ್ರ ಅಸಮಾಧಾನ.

ಲೇಖಕರು : ಯೋಗೇಶ್ ರಾಜಮಾರ್ಗ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular