ಎಸ್ ಸಿ, ಎಸ್ ಟಿ, ಸಮುದಾಯಕ್ಕೆ ನ್ಯಾಯ ದೊರಕಿಸುಕೊಡುವುದೇ ನಮ್ಮ ಸರ್ಕಾರದ ಏಕೈಕ ಗುರಿಯಾಗಿದ್ದು, ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್ ಗೆ ಸೇರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ದಾವಣಗೆರೆಯಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಅಂಗವಾಗಿ ಜನಜಾಗೃತಿ ಜಾತ್ರಾ ಮಹೋತ್ಸವದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಗಮೋಹನ್ ದಾಸ್ ವರದಿಯಂತೆ ತುಳಿತಕ್ಕೊಳಗಾಗಿರುವ ಸಮಾಜದವರ ಪರವಾಗಿ ನ್ಯಾಯ ನೀಡಲಾಗಿದೆ. ಎಸ್ ಸಿ ವರ್ಗಕ್ಕೆ ಶೇ. 15 ರಿಂದ ಶೇ. 17 ಮತ್ತು ಎಸ್ ಟಿ ಗೆ 3 ರಿಂದ ಶೇ. 7 ಕ್ಕೆ ಹೆಚ್ಚಿಸಲಾಗಿದೆ ಎಂದರು.
ಈ ಹೆಚ್ಚಳಕ್ಕೆ ಕಾನೂನಿನ ರಕ್ಷಣೆಯನ್ನು ಈಗಾಗಲೇ ಸರ್ಕಾರ ನೀಡಿದೆ. ಕೇವಲ ಭಾಷಣದಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಮೀಸಲಾತಿ ಹೆಚ್ಚಳವನ್ನು ಸರ್ಕಾರ ಈಗಾಗಲೇ ಜಾರಿ ಮಾಡಿದ್ದು, ಸರ್ಕಾರದ ನೇಮಕಾತಿಗಳಲ್ಲಿ ಈ ನಿಯಮವನ್ನು ಈಗಾಗಲೇ ಪಾಲಿಸಲಾಗುತ್ತಿದೆ ಎಂದು ಹೇಳಿದರು.
ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಲು ಪ್ರತ್ಯೇಕ ಸಚಿವಾಲಯ ಸ್ಥಾಪಿಸಲಾಗಿದೆ. 75 ಯೂನಿಟ್ ಉಚಿತ ವಿದ್ಯುತ್ , ಸಮುದಾಯದ ರೈತರಿಗೆ ಜಮೀನು ಖರೀದಿಗೆ 25 ಲಕ್ಷದವರೆಗೆ ಅನುದಾನ, ಮನೆ ನಿರ್ಮಾಣಕ್ಕೆ 2 ಲಕ್ಷ, ಹಾಸ್ಟೆಲ್ ಗಳ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.


