Thursday, November 21, 2024
Google search engine
Homeಮುಖಪುಟಕೇಂದ್ರದ ಬಜೆಟ್ ಶ್ರೀಮಂತರ ಪೋಷಣೆ, ಬಡವರ ವಿನಾಶ - ಸಿದ್ದರಾಮಯ್ಯ ಟೀಕೆ

ಕೇಂದ್ರದ ಬಜೆಟ್ ಶ್ರೀಮಂತರ ಪೋಷಣೆ, ಬಡವರ ವಿನಾಶ – ಸಿದ್ದರಾಮಯ್ಯ ಟೀಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಶ್ರೀಮಂತರ ಪೋಷಣೆ ಮತ್ತು ಬಡವರ ವಿನಾಶ ಎಂಬ ಜನವಿರೋಧಿ ನೀತಿಯ ಮುಂದುವರಿದ ಭಾಗವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕೇಂದ್ರ ಸರ್ಕಾರದ ದುರಾಡಳಿತ ಮತ್ತು ಕೊರೊನಾ ರೋಗದಿಂದಾಗಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟುಹೋಗಿದೆ. ರೈತರ ಬದುಕು ನೆಲ ಹಿಡಿದಿದೆ. ನಿರುದ್ಯೋಗದ ಪ್ರಮಾಣದಲ್ಲಿ ಹೆಚ್ಚಾಗಿದೆ. ಕೇಂದ್ರದ ಬಜೆಟ್ ನಲ್ಲಿ ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಕಳೆದ ಬಜೆಟ್ ಗೆ ಹೋಲಿಸಿದರೆ ಈ ಬಜೆಟ್ ನಲ್ಲಿ ಕೃಷಿಕ್ಷೇತ್ರಕ್ಕೆ ರೂ.8.468.21 ಕೋಟಿಯಷ್ಟು ಹಣ ಕಡಿಮೆ ನೀಡಿದೆ. ಸಣ್ಣ ಮತ್ತು ಮಧ್ಯಮ ರೈತರನ್ನು ಕೂಡಾ ಕಡೆಗಣಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿನ ಅನ್ಯಾಯ, ಅವೈಜ್ಞಾನಿಕ ಬೆಳೆ ವಿಮೆ, ಸಾಲದ ಹೊರೆ, ನೆರೆ ಮತ್ತು ಬರ ಪರಿಹಾರದಲ್ಲಿನ ಕೊರತೆಗಳ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವೇ ಇಲ್ಲ ಎಂದು ಆರೋಪಿಸಿದ್ದಾರೆ.

ರೈತರ ಆದಾಯವನ್ನು ದುಪ್ಪಟ್ಟು ಮಾಡಲಾಗುವುದು ಎಂಬ ಘೋಷಣೆ ಪೊಳ್ಳಾಗಿದೆ. ಕನಿಷ್ಠ ಸಣ್ಣ ಹಿಡುವಳಿದಾರ ರೈತರ ಸಾಲವನ್ನಾದರೂ ಮನ್ನಾ ಮಾಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ರೈತರಿಗೆ ಸಾಲ ನೀಡಲು ಎರಡು ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ರೈತರನ್ನು ಋಣಮುಕ್ತಗೊಳಿಸಬೇಕಾಗಿರುವ ಸರ್ಕಾರ ಅವರನ್ನು ಇನ್ನಷ್ಟು ಸಾಲದ ಬಲೆಗೆ ನೂಕಲು ಹೊರಟಿದೆ. ಹೊಸ ಸಾಲ ಪಡೆದು ಹಳೆಸಾಲ ತೀರಿಸಿ ಎನ್ನುವುದನ್ನು ಸರ್ಕಾರ ಹೇಳಿದೆ. ಈ ಸಾಲದ ಬಡ್ಡಿದರ ಎಷ್ಟು ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಭದ್ರ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಈ ಯೋಜನೆ ಪೂರ್ಣಗೊಳ್ಳಬೇಕಾದರೆ ರೂ.23 ಸಾವಿರ ಕೋಟಿ ಅವಶ್ಯಕತೆಯಿದೆ. ಕೇಂದ್ರ ಸರ್ಕಾರ ನೀಡಲು ಒಪ್ಪಿರುವುದು ಯೋಜನಾ ವೆಚ್ಚದ ಕಾಲುಭಾಗ ಮಾತ್ರ. ಈ ಹಣದಲ್ಲಿ 40% ಕಮಿಷನ್ ಕಳೆದರೆ ಕೊನೆಗೆ ಯೋಜನೆಗೆ ಸಿಗಲಿರುವುದು ರೂ.3000 ಕೋಟಿಗಿಂತಲೂ ಕಡಿಮೆ. ನಿಗದಿ ಪಡಿಸಿರುವ ಹಣ ಕೂಡಾ ಒಂದು ವರ್ಷಕ್ಕೋ ಐದು ವರ್ಷಕ್ಕೋ ಎನ್ನುವದನ್ನೂ ಸ್ಪಷ್ಟಪಡಿಸಿಲ್ಲ ಎಂದು ಲೇವಡಿ ಮಾಡಿದರು.

ನರೇಗಾ ಯೋಜನೆಗೆ ಶೇಕಡಾ 32ರಷ್ಟು ಕಡಿಮೆ ಅನುದಾನ ನಿಗದಿಪಡಿಸಲಾಗಿದೆ. 2022-23ರಲ್ಲಿ ರೂ.89,154 ಕೋಟಿ ಗಳಷ್ಟು ನೀಡಲಾಗುತ್ತಿದ್ದ ಅನುದಾನವನ್ನು 2023-24ರ ಸಾಲಿನಲ್ಲಿ ರೂ.61,032 ಕೋಟಿಗೆ ಇಳಿಸಲಾಗಿದೆ ಎಂದು ದೂರಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನಾ ವೆಚ್ಚವನ್ನು ಶೇಕಡಾ 66ರಷ್ಟು ಹೆಚ್ಚಿಸಲಾಗಿದೆ. ಪ್ರತಿಮನೆ ನಿರ್ಮಾಣ ವೆಚ್ಚವನ್ನು ರೂ.48,000 ರೂಪಾಯಿಗಳಿಂದ ರೂ.79, 590 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳ ಬಡ ಕುಟುಂಬಗಳಿಗೆ ನೆರವಾಗುವುದಕ್ಕೋ? ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲಿಕ್ಕಾಗಿಯೇ? ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರವೇ ಶೇಕಡಾ 50ರಷ್ಟು ಮನೆಗಳನ್ನೇ ನಿರ್ಮಿಸಲಾಗಿಲ್ಲ. ಬಹಳ ಮುಖ್ಯವಾಗಿ ನಗರ ಪ್ರದೇಶದಲ್ಲಿರುವ ಕೊಳಗೇರಿ ನಿವಾಸಿಗಳ ವಸತಿ ಸಮಸ್ಯೆಯನ್ನು ಪರಿಹರಿಸುವ ಪ್ರಸ್ತಾಪ ಬಜೆಟ್ ನಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದರೂ ಅವರು ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಒಂದೆರಡು ಬಾರಿ ಕರ್ನಾಟಕದ ಹೆಸರನ್ನು ಉಲ್ಲೇಖಮಾಡಿದ ಹೊರತಾಗಿ ವಿಶೇಷ ನೆರವಿನ ಘೋಷಣೆಗಳನ್ನು ಮಾಡಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರದ ಅಡಿಯಾಳಿನಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರ ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿಯ 25 ಲೋಕಸಭಾ ಸದಸ್ಯರು ಮತ್ತು ಆರು ರಾಜ್ಯಸಭಾ ಸದಸ್ಯರಿದ್ದಾರೆ. ಇವರಲ್ಲಿ ಯಾರೊಬ್ಬರು ರಾಜ್ಯದ ಬೇಡಿಕೆಗಳ ಬಗ್ಗೆಯಾಗಲಿ, ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆಯಾಗಲಿ ಎಲ್ಲಿಯೂ ಸೊಲ್ಲೆತ್ತಿಲ್ಲ, ಇದರಿಂದಾಗಿ ಕೇಂದ್ರ ಸರ್ಕಾರ ಕೂಡಾ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಟೀಕಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular