ವಾಯವ್ಯ ಪಾಕಿಸ್ತಾನದ ಪೇಶಾವರ ನಗರದ ಪೊಲೀಸ್ ಆವರಣದಲ್ಲಿರುವ ಮಸೀದಿಯೊಳಗೆ ಆತ್ಮಾಹುತಿ ಬಾಂಬ್ ದಾಳಿ ನಡೆದು ಕನಿಷ್ಟ 40 ಮಂದಿ ಸಾವನ್ನಪ್ಪಿದ್ದು 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಪೊಲೀಸರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್ ದಾಳಿಯು ವಿರೋಧ ಪಕ್ಷದ ರಾಜಕೀಯ ಪಕ್ಷಗಳು ಮತ್ತು ಸರ್ಕಾರಿ ಅಧಿಕಾರಿಗಳಿಂದ ರಾಷ್ಟ್ರವ್ಯಾಪಿ ಖಂಡನೆ ವ್ಯಕ್ತವಾಗಿದೆ. ಪೇಶಾವರ ರಾಜಧಾನಿಯಾಗಿರುವ ಖೈಬರ್ ಪಖ್ತುಂಖ್ವಾ ಪ್ರಾಂತಿಯ ಗವರ್ನರ್ ಗುಲಾಂ ಅಲಿ ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಬಲಿಯಾದವರಲ್ಲಿ ಹೆಚ್ಚಿನವರು ಪೊಲೀಸರು ಮತ್ತು ಪೊಲೀಸ್ ಅಧಿಕಾರಿಗಳು. ಉದ್ದೇಶಿತ ಮಸೀದಿಯು ವಿಸ್ತಾರವಾದ ಕಾಂಪೌಂಡ್ ನಲ್ಲಿದೆ. ಇದು ನಗರದ ಪೊಲೀಸ್ ಪ್ರಧಾನ ಕಚೇರಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಬಾಂಬರ್ ತನ್ನ ಸ್ಪೋಟಕಗಳನ್ನು ಸ್ಪೋಟಿಸಿಕೊಂಡಾಗ 300 ರಿಂದ 350 ಮಂದಿ ಮಸೀದಿಯೊಳಗೆ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಸ್ಪೋಟದ ಹೊಣೆಯನ್ನು ತಕ್ಷಣವೇ ಯಾರೂ ವಹಿಸಿಕೊಂಡಿಲ್ಲ ಎಂದು ಪೇಶಾವರದ ಹಿರಿಯ ಪೊಲೀಸ್ ಅಧಿಕಾರಿ ಸಿದ್ದಿಕ್ ಖಾನ್ ಹೇಳಿದ್ದಾರೆ. ಆದರೆ ಈ ಹಿಂದೆ ಇದೇ ರೀತಿಯ ಆತ್ಮಾಹುತಿ ದಾಳಿಗಳಲ್ಲಿ ಪಾಕಿಸ್ತಾನಿ ತಾಲಿಬಾನ್ ಗಳು ಎಂದು ಹೇಳಲಾಗುತ್ತಿದೆ.
ಪೊಲೀಸ್ ಕಾಂಪೌಂಡ್ ಪೇಶಾವರದಲ್ಲಿ ಹೆಚ್ಚಿನ ಭದ್ರತಾ ವಲಯದಲ್ಲಿದೆ. ಜೊತೆಗೆ ಹಲವಾರು ಸರ್ಕಾರಿ ಕಟ್ಟಡಗಳಿವೆ ಮತ್ತು ಬಾಂಬರ್ ಗಮನಿಸದೆ ವಲಯದೊಳಗೆ ಹೇಗೆ ನುಸುಳಲು ಸಾಧ್ಯವಾಯಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ದುರಂತದಲ್ಲಿ ಬದುಕುಳಿದ 38 ವರ್ಷದ ಪೊಲೀಸ್ ಅಧಿಕಾರಿ ಮೀನಾ ಗುಲ್ ಅವರು ಬಾಂಬ್ ಸ್ಪೋಟಗೊಂಡಾಗ ಮಸೀದಿಯೊಳಗೆ ಇದ್ದುದಾಗಿ ಹೇಳಿದ್ದು ಹೇಗೆ ಪ್ರಾಣಾಪಾಯದಿಂದ ಪಾರಾದರು ಎಂಬುದನ್ನು ಹೇಳಿಲ್ಲ. ಬಾಂಬ್ ಸ್ಪೋಟಗೊಂಡ ನಂತರ ಜನರು ಅಳುವುದು ಮತ್ತು ಕರುಚಾಟವನ್ನು ಕೇಳುತ್ತಿದ್ದರು ಎಂದು ಗುಲ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.