ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ಯಾಸ್ ಸಿಲಿಂಡರ್ ಅನ್ನು 500 ರೂಪಾಯಿಗೆ ನೀಡುತ್ತೇವೆ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಮೊದಲೇ ಈ ಭರವಸೆಯನ್ನು ನೀಡಿದ್ದು, ದೇಶದಲ್ಲಿ ಬಹುತ್ವವು ಅಪಾಯದಲ್ಲಿದೆ. ವಿಭಜಕ ಶಕ್ತಿಗಳು ನಮ್ಮ ವೈವಿಧ್ಯತೆಯನ್ನು ನಮ್ಮ ವಿರುದ್ಧ ತಿರುಗಿಸಲು ಪ್ರಯತ್ನಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ದೇಶದ ನಾಗರಿಕರನ್ನು ಉದ್ದೇಶಿಸಿ ಪತ್ರ ಬರೆದಿರುವ ರಾಹುಲ್ ಗಾಂಧಿ ಪ್ರತಿದಿನ ಬೀದಿಗಿಳಿದು ಸಂಸತ್ತಿನವರೆಗೆ ಸಾಮಾಜಿಕ ಅನಿಷ್ಠಗಳನ್ನು ನಿರ್ಮೂಲನೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಕೇವಲ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಇರುವ ಈ ಶಕ್ತಿಗಳು, ಜನರು ಅಭದ್ರತೆ ಮತ್ತು ಭಯವನ್ನು ಅನುಭವಿಸಿದಾಗ ಮಾತ್ರ ಅವರು ಇತರರ ಬಗ್ಗೆ ದ್ವೇಷದ ಬೀಜಗಳನ್ನು ಬಿತ್ತಬಹುದು ಎಂದು ತಿಳಿದಿದೆ. ಆದರೆ ಯಾತ್ರೆಯ ನಂತರ ಈ ಕೆಟ್ಟ ಅಜೆಂಡವು ಅದರ ಮಿತಿಗಳನ್ನು ಹೊಂದಿದೆ ಎಂದು ನನಗೆ ಮನವರಿಕೆಯಾಗಿದೆ ಎಂದು ಹೇಳಿದ್ದಾರೆ.
ನಾನು ನಿಮ್ಮ ಎಲ್ಲಾ ಕತೆಗಳನ್ನು ದಾರಿಯುದ್ದಕ್ಕೂ ಕೇಳಿದ್ದೇನೆ. ಜನರು ತಮ್ಮ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅವರ ಆದಾಯವು ಮತ್ತಷ್ಟು ಕುಸಿಯುತ್ತಿದೆ ಮತ್ತು ಉತ್ತಮ ಭವಿಷ್ಯದ ಅವರ ಕನಸುಗಳು ಭಗ್ನಗೊಳ್ಳುತ್ತಿವೆ. ಯುವಕರಲ್ಲಿ ನಿರುದ್ಯೋಗ, ಅಸಹನೀಯ ಬೆಲೆ ಏರಿಕೆ, ತೀವ್ರ ಕೃಷಿ ಸಂಕಟ ಮತ್ತು ದೇಶದ ಸಂಪತ್ತನ್ನು ಸಂಪೂರ್ಣವಾಗಿ ಕಾರ್ಪೋರೇಟ್ ವಶಪಡಿಸಿಕೊಳ್ಳುತ್ತಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿ ತಿಳಿಸಿದೆ.
ಜನರು ತಮ್ಮ ಉದ್ಯೋಗ ಕಳೆದುಕೊಳ್ಳುವ ಬಗ್ಗೆ ಚಿಂತಿತರಾಗಿದ್ದಾರೆ. ಅವರ ಆದಾಯವು ಮತ್ತಷ್ಟು ಕುಸಿಯುತ್ತಿದೆ ಮತ್ತು ಉತ್ತಮ ಭವಿಷ್ಯದ ಅವರ ಕನಸುಗಳು ಛಿದ್ರವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಯೊಬ್ಬರಿಗೂ ಆರ್ಥಿಕ ಸಮೃದ್ಧಿ, ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ, ನಮ್ಮ ಯುವಕರಿಗೆ ಉದ್ಯೋಗಗಳು, ದೇಶದ ಸಂಪತ್ತಿನ ನ್ಯಾಯಯುತ ಹಂಚಿಕೆ, ಎಂಎಸ್ಎಂಇಗಳು ಮತ್ತು ಉದ್ಯಮಿಗಳಿಗೆ ಅನುವು ಮಾಡಿಕೊಡುವ ವಾತಾವರಣ ಅಗ್ಗದ ಡೀಸೆಲ್, ರೂಪಾಯಿ ಸಬಲೀಕರಣಕ್ಕಾಗಿ ಕೆಲಸ ಮಾಡುವುದಾಗಿ ಗಾಂಧಿ ಹೇಳಿದ್ದಾರೆ.


