Friday, January 30, 2026
Google search engine
Homeಮುಖಪುಟಯಾವುದು ಸುಳ್ಳು, ಯಾವುದು ನಿಜ ಲೆಕ್ಕ ಹೇಳಿ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಯಾವುದು ಸುಳ್ಳು, ಯಾವುದು ನಿಜ ಲೆಕ್ಕ ಹೇಳಿ – ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಸ್ಕಾಂ ಗಳಿಗೆ ನೀಡಿದ್ದು 6000 ಕೋಟಿಯೋ? 9000 ಕೋಟಿಯೋ? ಯಾವುದು ನಿಜ ಲೆಕ್ಕ? ಯಾವುದು ಸುಳ್ಳು ಲೆಕ್ಕ? ಎಂಬುದನ್ನು ಸಚಿವ ಸುನೀಲ್ ಕುಮಾರ್ ಅವರು ಮೊದಲು ಹೇಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

2013ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಹೊತ್ತಿಗೆ ಹಿಂದಿನ ಸರ್ಕಾರ ವಿದ್ಯುತ್ ಇಲಾಖೆಯ ಮೇಲೆ ದೊಡ್ಡ ಮೊತ್ತದ ಸಾಲದ ಗಂಟನ್ನು ಹೊರಿಸಿ ಹೋಗಿತ್ತು, ಸಾಲ ಮಾಡಿ ಈ ಎಸ್ಕಾಂಗಳ ಬಾಕಿ ಮೊತ್ತ ತೀರಿಸಿ, ಕುತ್ತಿಗೆವರೆಗೂ ಮುಳುಗಿದ್ದ ಎಸ್ಕಾಂಗಳನ್ನು ಮೇಲೆತ್ತಿದವರು ನಾವು ಎಂದು ಹೇಳಿದ್ದಾರೆ.

ಅಗತ್ಯ ಇರುವ ಕ್ಷೇತ್ರಕ್ಕೆ ಹಣ ಹಾಕುವುದನ್ನು ನಷ್ಟ ಎನ್ನುವುದಿಲ್ಲ, ಬದಲಾಗಿ ಬಂಡವಾಳ ಹೂಡಿಕೆ ಎನ್ನುತ್ತಾರೆ ಎಂಬ ಅರ್ಥ ಶಾಸ್ತ್ರದ ಸರಳ ತತ್ವದ ಅರಿವಿಲ್ಲದ ಸುನೀಲ್ ಕುಮಾರ್ ಅವರ ಜ್ಞಾನಭಂಡಾರದ ಬಗ್ಗೆ ಅನುಕಂಪವಿದೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 2014-15 ರಲ್ಲಿ ರಾಜ್ಯದಲ್ಲಿ ಒಟ್ಟು ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಪ್ರಮಾಣ 14,825 ಮೆ.ವ್ಯಾ ಮಾತ್ರ. ಅದರಲ್ಲಿ ಸೋಲಾರ್ ಮೂಲದಿಂದ 118 ಮೆ.ವ್ಯಾ ಮತ್ತು ಗಾಳಿ ಮೂಲದಿಂದ 2,655 ಮೆ. ವ್ಯಾ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. 2018 ರ ವೇಳೆಗೆ ಸೋಲಾರ್ ಮೂಲದಿಂದ 6157 ಮೆ.ವ್ಯಾ. ಮತ್ತು ಗಾಳಿ ಮೂಲದಿಂದ 4730 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿ ತುಂಬಿದವರು ನಾವು ಎಂದು ತಿಳಿಸಿದ್ದಾರೆ.

ವಿದ್ಯುತ್ ಉತ್ಪಾದನೆ ಹೆಚ್ಚಾದರೆ ಇಲಾಖೆಗೆ ಲಾಭವಾಗುತ್ತಾ? ನಷ್ಟವಾಗುತ್ತಾ? ಕಲ್ಲಿದ್ದಲು ಮೂಲದ ಉಷ್ಣ ವಿದ್ಯುತ್ ಉತ್ಪಾದನೆ 2014-15 ರಲ್ಲಿ 6,197 ಮೆಗಾವ್ಯಾಟ್ ಇದ್ದದ್ದು, 2018 ರ ವೇಳೆಗೆ 11,366 ಮೆಗಾವ್ಯಾಟ್ ಗೆ ತಲುಪಿತ್ತು. ಇಂದು ನೀವು ವಿದ್ಯುತ್ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರೆ ಅದರ ಹಿಂದಿರುವುದು ನಮ್ಮ ಸರ್ಕಾರದ ಶ್ರಮ ಎಂದು ಹೇಳಿದ್ದಾರೆ.

ರಾಜ್ಯದ ಅಗತ್ಯತೆಗೆ ಸಾಕಾಗಿ, ಹೊರರಾಜ್ಯಗಳಿಗೆ ಮಾರಾಟ ಮಾಡುವಷ್ಟು ವಿದ್ಯುತ್ ಅನ್ನು ನಾವೇ ಉತ್ಪಾದನೆ ಮಾಡುತ್ತಿದ್ದರು, ದುಪ್ಪಟ್ಟು ದರ ನೀಡಿ ಹೊರಗಿನಿಂದ ಖರೀದಿ ಮಾಡುತ್ತಿರುವ ನಿಮ್ಮ ಸರ್ಕಾರ ಎಸ್ಕಾಂ ಗಳನ್ನು ಉದ್ಧಾರ ಮಾಡಿದೆ ಎಂಬುದು ತಮಾಷೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಸಚಿವ ಸುನೀಲ್ ಕುಮಾರ್ ಅವರ ಅಸಾಮರ್ಥ್ಯಕ್ಕೆ ತಕ್ಕುದಾಗಿ ರಾಜ್ಯದ ವಿದ್ಯುತ್ ಇಲಾಖೆ ಕೆಲಸ ಮಾಡುತ್ತಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಇಲಾಖೆಯನ್ನು ಲಾಭದ ಹಳಿಗೆ ತಂದು, ರಾಜ್ಯದ ಜನರಿಗೆ ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡುತ್ತೇವೆ ಎಂದಿದ್ದಾರೆ

ಸನ್ಮಾನ್ಯ ಸುನೀಲ್ ಕುಮಾರ್ ಅವರೇ, ನಾವು ನುಡಿದಂತೆ ನಡೆಯುವವರು. ಈ ಬಗ್ಗೆ ಅನುಮಾನವೇ ಬೇಡ. ರಾಜ್ಯದ ಜನರಿಗೆ 200 ಯುನಿಟ್ ಉಚಿತ ಘೋಷಣೆ ಮಾಡಿ, ಕಾರ್ಯಕ್ರಮಕ್ಕೆ ನಿಮ್ಮನ್ನೂ ಆಹ್ವಾನಿಸುತ್ತೇವೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular