ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ನೂರಾರು ಕಾರ್ಯಕರ್ತರು ತುಮಕೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸದಾಶಿವ ವರದಿಯನ್ನು ಕೂಡಲೇ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತುಮಕೂರು ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ, ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ನ್ಯಾ.ಎ.ಜೆ.ಸದಾಶಿವ ಆಯೋಗ 2012ರಲ್ಲಿ ಸಲ್ಲಿಸಿರುವ ವರದಿಯನ್ನು ಅಂಗೀಕಾರ ಮಾಡದೇ ಇರುವುದು ತಳ ಸಮುದಾಯಗಳ ಬಗ್ಗೆ ಸರಕಾರಕ್ಕೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಪರಿಶಿಷ್ಟ ಜಾತಿ, ವರ್ಗಗಳ ಅಭಿವೃದ್ಧಿಗಾಗಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಮೀಸಲಿಟ್ಟ ಹಣವನ್ನು ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದು ಖಂಡನೀಯ, ಈ ಹಣವನ್ನು ವಾಪಾಸ್ ಪಡೆಯಲು ಸರಕಾರದ ರಚಿಸಿಕೊಂಡಿರುವ 7 (ಡಿ) ಕಾಯ್ದೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಅಹಿಂದ ಮುಖಂಡ ವಿರೂಪಾಕ್ಷ ಡ್ಯಾಗೇರಹಳ್ಳಿ ಮಾತನಾಡಿ, ಪರಿಶಿಷ್ಟ ಜಾತಿಯ ಹೆಸರಲ್ಲಿ ವೀರಶೈವ ಲಿಂಗಾಯತ ಸಮುದಾಯಗಳು ಬೇಡಜಂಗಮ, ಬುಡ್ಗ ಜಂಗಮ ಹೆಸರಿನಲ್ಲಿ ಪಡೆದಿರುವ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ರದ್ದುಗೊಳಿಸಬೇಕು. ಸುಳ್ಳು ಪ್ರಮಾಣಪತ್ರ ನೀಡಿರುವ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ, ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡುತ್ತಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಿಸಬೇಕು, ಸರಕಾರಿ ಭೂಮಿಯಲ್ಲಿ ಗುಡಿಸಲು, ಮನೆಗಳನ್ನು ಕಟ್ಟಿಕೊಂಡಿರುವ ಬಡವರಿಗೆ ಹಕ್ಕುಪತ್ರ ನೀಡಬೇಕು, ವಸತಿ ಯೋಜನೆಯಡಿ ವಸತಿ ನಿರ್ಮಾಣಕ್ಕಾಗಿ ನೀಡುವ ಸಹಾಯಧನವನ್ನು 5 ಲಕ್ಷಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಶಿವಶಂಕರ್ ಕುಣಿಗಲ್, ಕುಂದೂರು ಮುರುಳಿ, ನಾಗತಿಹಳ್ಳಿ ಕೃಷ್ಣಮೂರ್ತಿ, ಚೇಳೂರು ಶಿವನಂಜಪ್ಪ, ಮೀನ ಕುಂಟನಹಳ್ಳಿ ನರಸಿಂಹಪ್ಪ, ಡಾ.ಮುರುಳೀಧರ್, ನಿಟ್ಟೂರು ಗಂಗಾರಾಂ, ಉಪ್ಪಾರಹಳ್ಳಿ ನಾಗರಾಜು, ಕೆಂಚಮಾರಯ್ಯ, ಬೆಲ್ಲದಮಡಗು ಶಿವಕುಮಾರ್, ಹಂದನಕೆರೆ ನಾಗರಾಜು ಇತರರು ಇದ್ದರು.