ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಬಿಜೆಪಿ ಸರ್ಕಾರದ ಮೇಲೆ ಆರೋಪಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಇದಕ್ಕೆ ಬಿಜೆಪಿ ಪಾಪದ ಪುರಾಣ ಎಂಬ ನಾಮಕರಣ ಮಾಡಿದ್ದೇವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಕಾಂಗ್ರೆಸ್ ಭವನದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಅನೈತಿಕ ಮಾರ್ಗದಿಂದ ರಚನೆಯಾದ ಸರ್ಕಾರ. ಇದು ಅನೈತಿಕ ಸರ್ಕಾರ. 2018ರಲ್ಲಿ ಇವರಿಗೆ ಜನ ಆಶೀರ್ವಾದ ಮಾಡಿರಲಿಲ್ಲ. 104 ಸ್ಥಾನವಷ್ಟೇ ಗೆದ್ದಿದ್ದರು. ಆದರೆ ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ರಾಜ್ಯಕ್ಕೆದಲ್ಲಿ ಕೋಟ್ಯಂತರ ರೂಪಾಯಿ ಪಾಪದ ಹಣ ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದರು ಎಂದು ಆರೋಪಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಕೋವಿಡ್ ಬಂದ ಸಮಯದಲ್ಲಿ ಸುಮಾರು 2500-3000 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಮಾಡಿದ್ದರು. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದರು. ಸರ್ಕಾರ ಉತ್ತರ ನೀಡದೆ ಜಾರಿಕೊಂಡಿತು. ರಾಜ್ಯದಲ್ಲಿ 3.5 ಲಕ್ಷ ಜನ ಸತ್ತಿದ್ದಾರೆ. ಅದರಲ್ಲೂ ಸುಳ್ಳು ಹೇಳಿ ಪರಿಹಾರ ನೀಡಲಿಲ್ಲ. ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು. ಕೇವಲ ಭ್ರಷ್ಟ ಮಾತ್ರವಲ್ಲ, ದುರ್ಬಲ ಸಿಎಂ. ಕೇಂದ್ರ ಹೇಳಿದಂತೆ ವರ್ತಿಸುವ ಸರ್ಕಾರ ಎಂದು ಟೀಕಿಸಿದರು.
15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ 5495 ಕೋಟಿ ನೀಡಬೇಕು ಎಂದು ತೀರ್ಮಾನವಾಯಿತು. ರಾಜ್ಯದಿಂದ ಆಯ್ಕೆಯಾದ ನಿರ್ಮಲ ಸೀತರಾಮನ್ ಇದನ್ನು ನೀಡಲು ಸಾಧ್ಯವಿಲ್ಲ ಎಂದು ಕೈಬಿಟ್ಟರು. ರಾಜ್ಯದಿಂದ 25 ಮಂದಿ ಸಂಸದರು ಇದ್ದರೂ ಅದನ್ನು ಕೇಳಲಿಲ್ಲ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಕೇಳಲಿಲ್ಲ. 14ನೇ ಹಣಕಾಸು ಆಯೋಗಕ್ಕೂ 15ನೇ ಆಯೋಗಕ್ಕೆ 1.07% ಕಡಿತ ಮಾಡಿದ್ದ ಹಿನ್ನೆಲೆಯಲ್ಲಿ ವಿಶೇಷ ಅನುದಾನವನ್ನು ಹಣಕಾಸು ಆಯೋಗ ಶಿಫಾರಸ್ಸು ಮಾಡಿತ್ತು. ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸವನ್ನು ರಾಜ್ಯ ಬಿಜೆಪಿ ನಾಯಕರು ಮಾಡಲಿಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ ತೆರಿಗೆ ಪಾಲು ಕೂಡ ಕಡಿಮೆಯಾಯಿತು. ನಮ್ಮ ರಾಜ್ಯದಿಂದ 3.5 ಲಕ್ಷ ಕೋಟಿ ತೆರಿಗೆ ಕೇಂದ್ರಕ್ಕೆ ಸಲ್ಲಿಕೆಯಾಗುತ್ತಿದೆ. ಆದರೆ ನಮಗೆ ಬೇರೆ ರಾಜ್ಯಗಳಿಗಿಂತ ಅತ್ಯಂತ ಕಡಿಮೆ ಅನುದಾನ ಕೊಟ್ಟಿದ್ದಾರೆ. ಹೀಗಾಗಿ ರಾಜ್ಯ ಸಾಲ ಮಾಡುವ ಸ್ಥಿತಿ ನಿರ್ಮಣವಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಬಂದಾಗಿನಿಂದ 2018ರವರೆಗೆ ರಾಜ್ಯದ ಸಾಲ 2.40 ಲಕ್ಷ ಕೋಟಿ ಇದ್ದು. ಈಗ ಅದು ಈ ವರ್ಷ ಮಾರ್ಚ್ ಅಂತ್ಯಕ್ಕೆ 5.40 ಲಕ್ಷ ಕೋಟಿ ಆಗಿದೆ. ನಾಲ್ಕು ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದರ ಪರಿಣಾಮವಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ ಅಸಲು ಮತ್ತು ಬಡ್ಡಿ 43 ಸಾವಿರ ಕೋಟಿ ನೀಡಬೇಕಾಗಿದೆ. ಸಾಲ ಹೆಚ್ಚಾದಷ್ಟು ಪಾವತಿ ಹೆಚ್ಚಾಗಿ ಅಭಿವೃದ್ಧಿಗೆ ಕಡಿಮೆ ಹಣ ಇರುತ್ತದೆ. ಪ್ರತಿ ಕನ್ನಡಿಗನ ಮೇಲೆ 86 ಸಾವಿರ ಕೋಟಿ ಸಾಲ ಇದೆ. ಹೀಗೆ ಮುಂದುವರಿದರೆ ರಾಜ್ಯ ಉಳಿಯುತ್ತದಾ? ಈ ರಾಜ್ಯ ಉಳಿಸಲು, ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.