ಕೇಂದ್ರ ಸರ್ಕಾರ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣವಾಗಿ ದಾಳಿ ಮಾಡುವ ಕೆಲಸ ಮಾಡುತ್ತಿದೆ. ಆರಂಭದಲ್ಲಿ ಕಾನೂನು ಸಚಿವ ಕಿರಣ್ ರಿಜಿಜು ಅವರು ಸಾರ್ವಜನಿಕವಾಗಿ ಸುಪ್ರೀಂ ಕೋರ್ಟ್ ಹೇಗೆ ಕೆಲಸ ಮಾಡಬೇಕು ಎಂದು ಬುದ್ಧಿವಾದ ಹೇಳಿದರು. ಸರ್ಕಾರದಲ್ಲಿ ನ್ಯಾಯಾಂಗದ ಮೇಲೆ ಹೇಗೆ ದಾಳಿ ಮಾಡಬೇಕು ಎಂದು ಪೂರ್ವ ತಯಾರಿ ಮಾಡಿಕೊಂಡು ಈ ದಾಳಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಚಂದ್ರಶೇಖರ್ ಆರೋಪಿಸಿದ್ದಾರೆ.
ಕಿರಣ್ ರಿಜಿಜು ಅವರ ನಂತರ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧಂಕರ್ ಅವರು ರಾಜ್ಯಸಭೆಯ ಮೊದಲ ಭಾಷಣದಲ್ಲಿ ನ್ಯಾಯಾಂಗ ವ್ಯವಸ್ಥೆ ಮೇಲೆ ದಾಳಿ ನಡೆಸಿದರು. ನಮ್ಮ ಅಜೆಂಡಾಕ್ಕೆ ನ್ಯಾಯಾಂಗ ವ್ಯವಸ್ಥೆಯಿಂದ ಮುಜುಗರವಾಗುತ್ತಿದೆ ಎಂದಿದ್ದಾರೆ. ಹಿಂದುತ್ವದ ಪ್ರತಿಪಾದನೆಗೆ ನ್ಯಾಯಾಂಗ ಅಡ್ಡಬರುತ್ತಿದೆ ಎಂದು ಅವರ ಅಧಿಕಾರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ಕಿರಣ್ ರಿಜಿಜು ಅವರು ಕೋಟ್ಯಂತರ ಪ್ರಕರಣಗಳ ಇತ್ಯರ್ಥ ಬಾಕಿ ಉಳಿದಿವೆ. ಬಹಳಷ್ಟು ನ್ಯಾಯಾಧೀಶರು ಹೆಚ್ಚಿನ ರಜೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಸಾರ್ವಜನಿಕ ಹಿತಾಸಕ್ತಿ, ಎನ್ ಜಿಓ ವಿರುದ್ಧ ಪತ್ರಕರ್ತರ ವಿರುದ್ಧದ ಪ್ರಕರಣಗಳನ್ನು ನಿಲ್ಲಿಸಬೇಕು.
ಸುಪ್ರೀಂ ಕೋರ್ಟ್ ಕಳೆದ ವರ್ಷ ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ 106 ಹೆಸರುಗಳನ್ನು ಕಳುಹಿಸಿತ್ತು. ಆದರೆ ಕೇಂದ್ರ ಸರ್ಕಾರ ನೇಮಕ ಮಾಡಿದ್ದು ಕೇವಲ 7 ನ್ಯಾಯಾಧೀಶರ ಹೆಸರು ಮಾತ್ರ. ಸುಪ್ರೀಂ ಕೋರ್ಟ್ ನಲ್ಲಿರುವ 34 ಹುದ್ದೆಗಳ ಪೈಕಿ 6 ಹುದ್ದೆ ಭರ್ತಿ ಮಾಡುತ್ತಿಲ್ಲ. ಹೈಕೋರ್ಟ್ ನಲ್ಲಿ 1108 ಹುದ್ದೆಗಳ ಪೈಕಿ 338 ಖಾಲಿ ಇವೆ. ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ 245220 ನ್ಯಾಯಾಧೀಶರ ಹುದ್ದೆಯಲ್ಲಿ 5200 ಹುದ್ದೆಗಳು ಖಾಲಿ ಇವೆ. ಇಷ್ಟಾದರೂ ಕಿರಣ್ ರಿಜಿಜು ಅವರು 4.84 ಕೋಟಿ ಪ್ರಕರಣಗಳು ಬಾಕಿ ಇವೆ ಎಂದು ಹೇಳುತ್ತಾರೆ. ಸುಪ್ರೀಂ ಕೋರ್ಟ ನಲ್ಲಿ 69 ಸಾವಿರ ಪ್ರಕರಣಗಳು, 59 ಲಕ್ಷ ಪ್ರಕರಣ ಹೈಕೋರ್ಟ್ ಗಳಲ್ಲಿ ಬಾಕಿ ಇವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ನ್ಯಾಯಾಲಯಗಳಲ್ಲಿ 4.5 ಕೋಟಿ ಪ್ರಕರಣಗಳು ಬಾಕಿ ಇವೆ.
ಸ್ಥಳೀಯ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕಾತಿಯನ್ನು ರಾಜ್ಯ ಸರ್ಕಾರ ಮಾಡಬೇಕೆ ಹೊರತು ಸುಪ್ರೀಂ ಕೋರ್ಟ್ ಕಕೊಲಿಜಿಯಂ ವ್ಯಾಪ್ತಿಗೆ ಬರುವುದಿಲ್ಲ. ಸುಪ್ರೀಂ ಕೋರ್ಟಿಗೂ ಇದಕ್ಕೂ ಸಂಬಂಧವಿಲ್ಲ. ಇದನ್ನು ಆಲೋಚನೆ ಮಾಡದೇ ಕಿರಣ್ ರಿಜಿಜು ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಇನ್ನು ದೇಶದಲ್ಲಿ ಕೇಂದ್ರ ಸರ್ಕಾರ ಹಾಗೂ ಅದರ ಇಲಾಖೆಗಳು ಹೂಡಿರುವ ಪ್ರಕರಣಗಳ ಸಂಖ್ಯೆ 6 ಲಕ್ಷ ಪ್ರಕರಣಗಳು ಬಾಕಿ ಇವೆ.
ಬಿಜೆಪಿ ಅವರು ಎಲ್ಲ ಅಂಗಗಳ ಅಧಿಕಾರವನ್ನು ಕೇಂದ್ರೀಕರಿಸಲು ಈ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಉಪರಾಷ್ಟ್ರಪತಿಗಳು ಸಂಸತ್ತಿನ ಸರ್ವಾಧಿಕಾರದ ಬಗ್ಗೆ ಮಾತನಾಡುತ್ತಾರೆ. ಇದರ ಮೂಲಕ ಸಂಸತ್ತಿನ ಮುಂದೆ ಸುಪ್ರೀಂ ಕೋರ್ಟ ಸೇರಿದಂತೆ ಬೇರೆ ಯಾವುದೂ ನಿಲ್ಲಬಾರದು ಎಂಬ ಉದ್ದೇಶ ಅಡಗಿದೆ. ಆದರೆ ನಮ್ಮ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವಿಭಾಗಿಸಲಾಗಿದೆ. ಆದರೆ ಇದನ್ನು ಮೀರಿ ಎಲ್ಲ ಅಂಗಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ಹೀಗೆ ಎಲ್ಲ ಅಧಿಕಾರಿಗಳು ಒಂದು ಕಡೆ ಕೇಂದ್ರೀಕೃತವಾದರೆ ಸರ್ವಾಧಿಕಾರಿ ವ್ಯವಸ್ಥೆ ಆಗುತ್ತದೆ.
ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ. ಇಡಿ, ಚುನಾವಣಾ ಆಯೋಗ, ಮಾಹಿತಿ ಆಯೋಗ, ಆದಾಯ ತೆರಿಗೆ ಇಲಾಖೆಗಳು ಕೇಂದ್ರದ ನಿರ್ದೇಶನದಂತೆ ನಡೆಯುತ್ತಿವೆ. ಹೀಗಾಗಿ ಅವರಿಗೆ ಬೇಕಾದವರ ಮೇಲೆ ದಾಳಿ ಮಾಡಿಸುವಂತಾಗಿದೆ. ಅದೇ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಅವರ ಮೇಲೆ ನಿರಂತರ ದಾಳಿ ಮಾಡಿಸುತ್ತಿದ್ದಾರೆ. ಎಲ್ಲಿ ಚುನಾವಣೆ ನಡೆಯುತ್ತದೆಯೋ ಅಲ್ಲಿ ಚುನಾವಣೆಗೆ ಒಂದು ತಿಂಗಳ ಮುಂಚೆ ದಾಳಿಗಳು ನಡೆಯುತ್ತವೆ. ಈ ಎಲ್ಲ ಆಯೋಗಗಳು ಬೆನ್ನೆಲುಬು ಇಲ್ಲದ ಸಂಸ್ಥೆಗಳಾಗಿವೆ. ಸರ್ಕಾರದ ವಿರುದ್ಧ ಯಾರೇ ಮಾತನಾಡಿದರೂ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ ಎಂದು ಟೀಕಿಸಿದ್ದಾರೆ.