ತುಮಕೂರು ಹೊರವಲಯದ ಮೈದಾಳದ ಬಳಿ ಇರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮಹಿಳೆಯರ ವಸತಿ ನಿಲಯದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಎಐಎಂಎಸ್‌ಎಸ್ ಹಾಗೂ ಎಐಡಿಎಸ್‌ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಎಂ.ವಿ. ಕಲ್ಯಾಣಿ, ಆಡಳಿತಾರೂಢ ಸರ್ಕಾರಗಳು ತಮ್ಮ ಭಾಷಣಗಳಲ್ಲಿ ಮಾತ್ರ ಮಹಿಳಾ ಪರವಾದ ಉದ್ದುದ್ದ ಬಣ್ಣದ ಮಾತುಗಳನ್ನು ಭಾಷಣಗಳಲ್ಲಿ ಮಾತನಾಡುತ್ತಾರೆ ಅಷ್ಟೆ. ಮಹಿಳಾ ಭದ್ರತೆಯು ಮರೀಚಿಯಾಗಿರುವ ದಿನಗಳಲ್ಲಿ ಹಾಸ್ಟೆಲ್‌ನ್ನು ಊರಿನ ಹೊರಗಡೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಪ್ರತಿದಿನ ಮಕ್ಕಳಿಗೆ ಕೊಡುವ ಆಹಾರದಲ್ಲಿ ಕೊರತೆ ಉಂಟಾಗಲು ಕಾರಣವೇನು? ಮಹಿಳೆಯರ ನೈಜ ಸಮಸ್ಯೆಗಳನ್ನು ಬಗೆಹರಿಸುವ ಇಚ್ಚಾಶಕ್ತಿಯು ಸರ್ಕಾರಗಳಿಗೆ ಇಲ್ಲ ಎಂದು ದೂರಿದರು.
ಎಐಡಿಸ್‌ಓ ಜಿಲ್ಲಾಧ್ಯಕ್ಷೆ ಅಶ್ವಿನಿ ಮಾತನಾಡಿ, ಉನ್ನತ ಶಿಕ್ಷಣದ ಕನಸನ್ನು ಹೊತ್ತು ಬಂದ ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿನ ಅವ್ಯವಸ್ಥೆಯಿಂದಾಗಿ ಶಿಕ್ಷಣವನ್ನ ಮೊಟಕುಗೊಳಿಸುವ ಪರಿಸ್ಥಿತಿ ಉಂಟಾಗಿದೆ. ವ್ಯವಸ್ಥಿತವಾಗಿ ಇರಬೇಕಾದಂತಹ ವಿದ್ಯಾರ್ಥಿನಿಯರ ವಸತಿ ನಿಲಯಗಳು ಅವ್ಯವಸ್ಥೆಯ ಆಗರಗಳಾಗಿವೆ. ವಿದ್ಯಾರ್ಥಿ ನಿಲಯದಲ್ಲಿ ೧೨೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇರುತ್ತಾರೆ, ಆದರೆ ಇಷ್ಟು ವಿದ್ಯಾರ್ಥಿನಿಯರಿಗೆ ನೀಡಬೇಕಾದ ಮೂಲಭೂತ ಸೌಕರ್ಯಗಳು ಇಲ್ಲವಾಗಿದೆ. ವಿದ್ಯಾರ್ಥಿನಿಯರು ಓದಿನ ಕಡೆ ಗಮನಹರಿಸುವುದನ್ನು ಬಿಟ್ಟು ಊಟಕ್ಕಾಗಿ, ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದು ಆರೋಪಿಸಿದರು.
ಪ್ರತಿಭಟನೆಗೆ ಮಣಿದು ಹಿಂದುಳಿದ ವರ್ಗಗಳಇಲಾಖೆಯ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಲು ಮೂರು ದಿನಗಳ ಕಾಲಾವಕಾಶ ಕೇಳಿದರು. ಈಗಾಗಲೆ ವಸತಿ ಪಾಲಕರನ್ನು ವರ್ಗಾವಣೆ ಮಾಡಿದ್ದೇವೆ. ಅವರ ಮೇಲೆ ಬಂದಿರುವ ಆರೋಪಗಳನ್ನು ಒಂದು ವಾರದೊಳಗೆ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ರತ್ನಮ್ಮ, ಎಐಡಿಎಸ್‌ಓ ಸಂಘಟನಕಾರ ಭರತ್, ಸೈಯದ್, ವೃಷಭ್, ರಘು ಮತ್ತು ವಿದ್ಯಾರ್ಥಿಗಳ ಭಾಗವಹಿಸಿದ್ದರು.