ಬ್ಯಾಂಕಿನ ಸದಸ್ಯರು ಹಾಗೂ ಹಿತೈಷಿಗಳು ತುಮಕೂರು ನಗರದಲ್ಲಿ ಟಿ.ಜಿ.ಎಂ.ಸಿ ಬ್ಯಾಂಕ್ ಉಳಿಸಿ ಅಭಿಯಾನ ನಡೆಸಿದರು. ಸಿದ್ಧಗಂಗಾ ಮಠದಲ್ಲಿ ಸಿದ್ಧಲಿಂಗಸ್ವಾಮಿಗಳನ್ನು ಭೇಟಿಯಾದ ಸದಸ್ಯರು ನಂತರ ಎಪಿಎಂಸಿ ಯಾರ್ಡ್ ನಲ್ಲಿ ಟಿಜಿಎಂಸಿ ಬ್ಯಾಂಕ್ ಉಳಿಸಿ ಅಭಿಯಾನ ನಡೆಸಿ ಬ್ಯಾಂಕ್ ಗ್ರಾಹಕರಲ್ಲಿ ಜಾಗೃತಿ ಮೂಡಿಸಿದರು.
ಬ್ಯಾಂಕಿನ ಸದಸ್ಯರು ಹಾಗೂ ಸಾರ್ವಜನಿಕರಿಂದ ಹತ್ತಾರು ಕೋಟಿ ರೂ. ಠೇವಣಿ ಹಣವನ್ನು ದಿವಾಳಿಯಾಗುವ ಸಂಸ್ಥೆಗೆ ಆಧಾರರಹಿತವಾಗಿ, ಅವಕಾಶವೇ ಇಲ್ಲದಿದ್ದರೂ ವ್ಯವಸಾಯ ಭೂಮಿ ಆಧಾರವಾಗಿ ನಿಯಮಾವಳಿ ಉಲ್ಲಂಘಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾಲ ನೀಡಿ ವ್ಯವಹರಿಸಲು ಟಿಜಿಎಂಸಿ ಬ್ಯಾಂಕಿನ ಕಳಂಕಿತ ಹಾಗೂ ಆರೋಪಿತ ನಿರ್ದೇಶಕರಿಗೆ ಅಧಿಕಾರ ಕೊಟ್ಟರ‍್ಯಾರು? ಬ್ಯಾಂಕಿನ ಆರೋಪಿತ ಹಾಗೂ ಕಳಂಕಿತ ನಿರ್ದೇಶಕರ ವಿರುದ್ಧ ಸಹಕಾರ ಕಾಯಿದೆ ಕಲಂ 64ರ ಅಡಿಯಲ್ಲಿ ತನಿಖೆ ನಡೆಯುತ್ತಿರುವುದು ಸರಿಯಷ್ಟೇ. ದೂರುದಾರ ತಾನು ಮಾಡಿರುವ ಆರೋಪ ಸಾಬೀತುಪಡಿಸುವಂತಹ ದಾಖಲೆಗಳನ್ನು ಕಲೆಹಾಕಿ ತನಿಖಾಧಿಕಾರಿಗಳ ಕಚೇರಿಗೆ ಸಲ್ಲಿಸಿದ್ದು, ಸದರಿ ದಾಖಲೆಗಳು ತನಿಖಾಧಿಕಾರಿ ಕಚೇರಿಯಿಂದ ಕಾಣೆಯಾಗಿವೆ. ಈ ದಾಖಲೆಗಳಿಂದ ಆರೋಪ ಸಾಬೀತಾಗುವುದೆಂಬ ಭಯದಿಂದ ಸಂಬಂಧಪಟ್ಟ ತನಿಖಾಧಿಕಾರಿಗಳು ಕಚೇರಿಯಿಂದ ಮಂಗಮಾಯ ಮಾಡಿರುವ ಸಾಧ್ಯತೆಯಿದೆ ಎಂದು ಬ್ಯಾಂಕಿನ ಸದಸ್ಯರು ಹೇಳಿದ್ದಾರೆ.
ಹಾಲಿ ನಿರ್ದೇಶಕರು ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ ಎನ್ನುವುದು ಸತ್ಯವೇ ಆಗಿದ್ದರೆ ತನಿಖೆಗೆ ಹೆದರುವ ಅವಶ್ಯಕತೆ ಇಲ್ಲ ಅಲ್ಲವೆ? ತನಿಖೆಯಿಂದ ಮಾತ್ರ ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿದೆ ಅಥವಾ ನಡೆದಿಲ್ಲ ಎಂದು ಸಾಬೀತಾಗಲು ಸಾಧ್ಯ ಅಲ್ಲವೆ? ಎಂದು ಕೇಳಿದ್ದಾರೆ.
ಬ್ಯಾಂಕಿನ ಸದಸ್ಯರೊಬ್ಬರು ತಮಗೆ ಸಿಕ್ಕಿರುವ ಮಾಹಿತಿ ಹಾಗೂ ದಾಖಲೆ ಸಮೇತ ಬ್ಯಾಂಕಿನಲ್ಲಿ ನಡೆದಿರುವ ನೂರಾರು ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಸರ್ವಸದಸ್ಯರ ಸಭೆಯಲ್ಲಿ ನಿಯಮಾವಳಿ ಪ್ರಕಾರ ಚರ್ಚಿಸಲು ಬಯಸಿದಾಗ ಸಭೆಯಲ್ಲಿ ಚರ್ಚಿಸಲು ಅವಕಾಶ ನೀಡದೆ ಸದಸ್ಯರ ಪರಮಾಧಿಕಾರ ಕಿತ್ತುಕೊಂಡದ್ದು ಏಕೆ? ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರ ಬಯಲಿಗೆಳೆದ ಅನ್ನುವ ಕಾರಣದಿಂದ ನಿಯಮಬಾಹಿರವಾಗಿ, ಸಹಕಾರಿ ಕಾಯಿದೆ ಹಾಗೂ ಬ್ಯಾಂಕ್ ಬೈಲಾವನ್ನು ಉಲ್ಲಂಘಿಸಿ ಬ್ಯಾಂಕಿನ ಸದಸ್ಯತ್ವದಿಂದ ವಜಾಗೊಳಿಸಿದ್ದು ಆಡಳಿತದ ದುರುಪಯೋಗವಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಬ್ಯಾಂಕಿನಲ್ಲಿ ನಡೆದಿರುವ ನೂರಾರು ಕೋಟಿ ರೂ. ಅವ್ಯವಹಾರದ ಬಗ್ಗೆ ಮಹಾಸಭೆಯಲ್ಲಿ ಚರ್ಚಿಸಲು ಅವಕಾಶ ನೀಡದಿದ್ದಾಗ ಬ್ಯಾಂಕಿನ ಹಿತದೃಷ್ಟಿಯಿಂದ ಕಳಂಕಿತ ಹಾಗೂ ಆರೋಪಿತ ಆಡಳಿತ ಮಂಡಳಿಯವರ ವಿರುದ್ಧ ಕಾನೂನು ರೀತ್ಯ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಬ್ಯಾಂಕಿನ ಸದಸ್ಯನೊಬ್ಬ ಆಡಳಿತ ಮಂಡಳಿಯ ವಿರುದ್ಧ ಮಾಡಿರುವ ಗಂಭೀರ ಆರೋಪ ಸರಿಯೆಂದು ಪರಿಭಾವಿಸಿ, ಆರೋಪವನ್ನೇ ಮಾನದಂಡವಾಗಿ ಬ್ಯಾಂಕಿನ ಇಬ್ಬರು ಪ್ರಮಾಣಿಕ ನಿರ್ದೇಶಕರು ಆತ್ಮಸಾಕ್ಷಿಗೆ ಅನುಗುಣವಾಗಿ ನೈತಿಕತೆಯ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮೇಲ್ಪಂಕ್ತಿಯಾದಾಗ ಉಳಿದವರು ನೈತಿಕತೆ ಹಿನ್ನೆಯಲ್ಲಿ ಅದನ್ನು ಅನುಸರಿಸಲಿಲ್ಲ ಏಕೆ ಎಂದು ಕೇಳಿದ್ದಾರೆ.
ಟಿಜಿಎಂಸಿ ಬ್ಯಾಂಕ್ ಉಳಿಸಿ ಅಭಿಯಾನದಲ್ಲಿ ಮುಖಂಡರಾದ ಎಂ.ಎನ್.ಲೋಕೇಶ್, ಜಿ.ಕೆ.ಶ್ರೀನಿವಾಸ್, ಗುರುಪ್ರಸಾದ್, ವಿಜಯಕುಮಾರ್, ಬಿ.ಎಸ್.ಮಹೇಶ್, ರೇಖಾ ಕುಮಾರ್, ಜಿ.ಎಸ್.ಬಸವರಾಜು, ಕಲ್ಪನಾ ಪ್ರಸಾದ್, ಶಂಕರ್, ಪುಟ್ಟರುದ್ರಪ್ಪ, ನಂದಿನಿ ಮೊದಲಾದವರು ಭಾಗವಹಿಸಿದ್ದರು.