Saturday, October 19, 2024
Google search engine
Homeಮುಖಪುಟಒಬಿಸಿ ರಾಜಕೀಯ ಮೀಸಲಾತಿ ಕುರಿತು ರಾಜ್ಯ ಸರ್ಕಾರ ನಿರ್ಲಕ್ಷ್ಯ - ಸಿದ್ದರಾಮಯ್ಯ

ಒಬಿಸಿ ರಾಜಕೀಯ ಮೀಸಲಾತಿ ಕುರಿತು ರಾಜ್ಯ ಸರ್ಕಾರ ನಿರ್ಲಕ್ಷ್ಯ – ಸಿದ್ದರಾಮಯ್ಯ

ಹಿಂದುಳಿದ ಸಮುದಾಯಗಳ ರಾಜಕೀಯ ಮೀಸಲಾತಿ ಬಗೆಗಿನ ರಾಜ್ಯ ಬಿಜೆಪಿ ಸರ್ಕಾರದ ನಿರ್ಲಕ್ಷದಿಂದಾಗಿ ಆ ಸಮುದಾಯಕ್ಕೆ ಅನ್ಯಾಯವಾಗಿರುವುದು ಮಾತ್ರವಲ್ಲ, ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ನಿಗದಿತ ಕಾಲಕ್ಕೆ ನಡೆಯದಂತಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳ ರಾಜಕೀಯ ಮೀಸಲಾತಿಯನ್ನು ಅಂತಿಮಗೊಳಿಸಲು ರಾಜ್ಯ ಸರ್ಕಾರ ವಿಳಂ ನೀತಿ ಅನುಸರಿಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಉದಾರವಾಗಿ ಮತ್ತೆ ಮಾರ್ಚ್ 31ರ ಗಡುವು ನೀಡಿದೆ. ರಾಜ್ಯ ಸರ್ಕಾರದ ನಡೆನುಡಿಗಳನ್ನು ಗಮನಿಸುತ್ತಾ ಬಂದರೆ ಒಬಿಸಿಗಳಿಗೆ ಮೀಸಲಾತಿ ಕಲ್ಪಿಸುವ ಉದ್ದೇಶವೇ ಸರ್ಕಾರಕ್ಕೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ವಿಶ್ವಾಸಾರ್ಹ ಅಂಇಕ ಅಂಶಗಳಿಂದ ಕೂಡಿದ ಮಾಹಿತಿಯನ್ನು ಆಧರಿಸಿ ಮೀಸಲಾತಿ ನೀತಿಯನ್ನು ರೂಪಿಸಬೇಕೆಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ ರಾಜ್ಯ ಸರ್ಕಾರ ಮಾತ್ರ ಅವಸರದಲ್ಲಿ ನಿವೃತ್ತ ನ್ಯಾಯಮೂರ್ತಿ ಎಂ.ಕೆ.ಭಕ್ತವತ್ಸಲ ಅವರ ಸಮಿತಿ ನೇಮಿಸಿ ಅಷ್ಟೇ ಅವಸರದಲ್ಲಿ ಶಿಫಾರಸುಗಳನ್ನು ಪಡೆದು ಮೀಸಲಾತಿಯನ್ನು ರೂಪಿಸಿದೆ ಎಂದು ತಿಳಿಸಿದ್ದಾರೆ.

ನ್ಯಾ. ಭಕ್ತವತ್ಸಲ ಅವರ ಸಮಿತಿ ಶಿಫಾರಸು ಆಧರಿತ ಮೀಸಲಾತಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿದ ನಂತರವೂ ತಪ್ಪನ್ನು ಸರಿಪಡಿಸಿಕೊಳ್ಳದೆ ಇರುವ ಕಾರಣದಿಂದಾಗಿ ಸುಪ್ರೀಂಕೋರ್ಟ್ ಮತ್ತೆ ರಾಜ್ಯ ಸರ್ಕಾರದ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ನಿಖರವಾದ ಅಂಕಿ ಅಂಶಗಳು ಮತ್ತು ವಿಶ್ವಾಸಾರ್ಹ ಮಾಹಿತಿಯೊಡನೆ ವೈಜ್ಞಾನಿಕವಾಗಿ ನಡೆಸಿದ ಸಮೀಕ್ಷೆಯ ಆಧಾರದಲ್ಲಿ ಮೀಸಲಾತಿ ನೀತಿಯನ್ನು ರೂಪಿಸಬೇಕೆಂದು ಸುಪ್ರೀಂಕೋರ್ಟ್ ಹೇಳುತ್ತಲೇ ಬಂದಿದೆ ಎಂದರು.

ಕರ್ನಾಟಕದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಅತ್ಯಂತ ವೈಜ್ಞಾನಿಕವಾಗಿ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಸಿದ್ಧವಾಗಿದೆ. ಇದರ ಆಧಾರದಲ್ಲಿಯೇ ಸ್ಥಳೀಯ ಸಂಸ್ಥೆಗಳಲ್ಲಿ ಒ.ಬಿ.ಸಿ ಮೀಸಲಾತಿಯನ್ನು ರೂಪಿಸಿದರೆ ಸುಪ್ರೀಂ ಕೋರ್ಟ್ ಕೂಡಾ ಒಪ್ಪುವ ಸಾಧ್ಯತೆ ಇದೆ ಎಂದು ಸಲಹೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular