ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 134 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರಕ್ಕೇರಲು ಸಿದ್ದತೆ ನಡೆಸಿದೆ. ಈ ಮೂಲಕ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ.
ಮಧ್ಯಾಹ್ನ 3.35ರ ವೇಳೆಗೆ ದೆಹಲಿಯ ಒಟ್ಟು 250 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಎಪಿ 134, ಬಿಜೆಪಿ 104, ಕಾಂಗ್ರೆಸ್ 9 ಮತ್ತು ಇತರರು 4 ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ದೆಹಲಿಯ ಬಹುತೇಕ ಕಡೆಗಳಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಪೋರೇಟರ್ ಗಳು ಆಯ್ಕೆಯಾಗುತ್ತಿದ್ದಂತೆಯೇ ಎಎಪಿ ಕಚೇರಿಗಳಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
ದೇಶಭಕ್ತಿ ಗೀತೆಗಳು ಮೊಳಗಿದವು, ಕಚೇರಿಗಳನ್ನು ವೈವಿಧ್ಯಮಯ ಬಣ್ಣಗಳ ಬಲೂನುಗಳನ್ನು ಅಳವಡಿಸಿ ಸಿಂಗರಿಸಲಾಯಿತು. ಇದೇ ವೇಳೆ ಸಿಹಿಯನ್ನು ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು.
2017ರಲ್ಲಿ ಬಿಜೆಪಿ 270 ವಾರ್ಡುಗಳ ಪೈಕಿ 181 ಸ್ಥಾನಗಳನ್ನು ಪಡೆದಿತ್ತು. ಎಎಪಿ ಕೇವಲ 48 ಸ್ಥಾನಗಳಲ್ಲಿ ವಿಜಯ ಸಾಧಿಸಿತ್ತು. ಕಾಂಗ್ರೆಸ್ ಪಕ್ಷ 30 ಸ್ಥಾನಗಳನ್ನು ತನ್ನದಾಗಿಸಿಕೊಂಡು ಮೂರನೇ ಸ್ಥಾನ ಗಳಿಸಿತ್ತು.