ಅಪರಿಚಿತ ವ್ಯಕ್ತಿಯೊಬ್ಬ ಚಾಕಲೇಟ್ ತಿನ್ನುವಂತೆ ವಿದ್ಯಾರ್ಥಿಗಳಿಗೆ ಕರೆದಿರುವ ಪ್ರಕರಣ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಬಳಿ ನಡೆದಿದೆ. ಅಪರಿಚಿತ ಚಾಲಕೇಟ್ ನೀಡಲು ಬಂದಾಗ ವಿದ್ಯಾರ್ಥಿಗಳು ನಿರಾಕರಿಸಿ ಭಯದಿಂದ ಓಡಿದ್ದಾರೆ.
ಕೂಡಲೇ ಈ ವಿಷಯವನ್ನು ವಿದ್ಯಾರ್ಥಿಗಳು ಶಿಕ್ಷಕರಿಗೆ ತಿಳಿಸಿದ್ದಾರೆ. ಯಾರೇ ಆಗಲಿ ಅಪರಿಚಿತ ವ್ಯಕ್ತಿಗಳು ಸಿಹಿ ತಿನಿಸು ನೀಡಲು ಬಂದಾಗ ಅದನ್ನು ತೆಗೆದುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಸಿದ್ದಾರೆ ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ 9.30ಕ್ಕೆ ವಿದ್ಯಾರ್ಥಿಗಳು ಶಾಲೆಯ ಬಳಿ ಬಂದಿದ್ದಾರೆ. ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಕುಳಿತಿದ್ದರು. ಆಗ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ಜೇಬಿನಿಂದ ಚಾಕಲೇಟ್ ಗಳನ್ನು ತೆಗೆದು ವಿದ್ಯಾರ್ಥಿಗಳಿಗೆ ನೀಡಲು ಹೋಗಿದ್ದಾನೆ. ಆಗ ಭಯಗೊಂಡ ವಿದ್ಯಾರ್ಥಿಗಳು ಅಲ್ಲಿಂದ ತೆರಳಿ ಶಿಕ್ಷಕರಿಗೆ ತಿಳಿಸಿದ್ದಾರೆ.
ಹೀಗಾಗಿ ಶಿಕ್ಷಕರು ತರಗತಿ ತೆಗೆದುಕೊಂಡಾಗ ಯಾವುದೇ ಕಾರಣಕ್ಕೂ ಅಪರಿಚಿತರು ಕೊಡುವ ಯಾವುದೇ ಸಿಹಿ ಪದಾರ್ಥಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗುವುದು ಪ್ರತಿದಿನ ಬೆಳಗ್ಗೆ 9.50ಕ್ಕೆ. ಹಾಗಾಗಿ ವಿದ್ಯಾರ್ಥಿಗಳು ಶಾಲೆಯ ಬಳಿಗೆ 9.45 ಗಂಟೆಗೆ ಬರುವಂತೆ ಮಕ್ಕಳಿಗೆ ಶಿಕ್ಷಕರು ತಿಳಿಹೇಳಿದರು ಎಂದು ತಿಳಿದುಬಂದಿದೆ.