2023ರ ತುಮಕೂರು ಗ್ರಾಮಾಂತರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಬಿ.ಸುರೇಶ್ ಗೌಡ ಗೆದ್ದೇ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ನಿರ್ಮಿಸಿರುವ ಬಿಜೆಪಿ ಕಚೇರಿ ಶಕ್ತಿಸೌಧವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2023ರ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದರು.
ಸುರೇಶ್ ಗೌಡ ಕೊಟ್ಟ ಮಾತಿನಂತೆ ನಡೆಯುವ ಧೀಮಂತಿಗೆ ಇದೆ. ಅವರು ಮಾಡಿರುವ ಕೆಲಸ ನೋಡಿದರೆ ಅಚ್ಚರಿಯಾಗುತ್ತದೆ. ವಿದ್ಯುತ್ ಶಕ್ತಿ ಗ್ರಿಡ್, ಶಾಲೆಗಳು, ರೈತರಿಗೆ ಉಪಯುಕ್ತವಾಗುವ ಪಂಪ್ ಸೆಟ್ ಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಕೆ ಸೇರಿ ಸರ್ಕಾರಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಹಂಬಲ ಅವರಿಗಿದೆ ಎಂದರು.
ಅಭಿವೃದ್ಧಿ ಚಕ್ರ ನಿರಂತರವಾಗಿ ತಿರುಗಬೇಕು. ನಿಮ್ಮ ಬದುಕಿನ ಗುಣಮಟ್ಟ ಹೆಚ್ಚಾಗಬೇಕು. ಸರ್ಕಾರದ ಯೋಜನೆ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕು. ಇದೆಲ್ಲವೂ ಸಾಧ್ಯವಾಗಬೇಕಾದರೆ ಸುರೇಶ್ ಗೌಡರ ಕೈಹಿಡಿಯಬೇಕು ಎಂದು ಸಿಎಂ ತಿಳಿಸಿದರು.
ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಗ್ರಾಮಾಂತರ ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸಬೇಕು. ಹೆಬ್ಬೂರು-ಗೂಳೂರು ಹೋಬಳಿಗಳ ಕೆರೆಗಳಿಗೆ ನೀರು ತುಂಬಿಸಲು ಶಾಶ್ವತ ನೀರಾವರಿ ಯೋಜನೆ ಜಾರಿಗೆ ಅಗತ್ಯವಿದೆ ಎಂದು ತಿಳಿಸಿದರು.