ಕನ್ನಡ ಅನ್ನದ ಭಾಷೆ, ಬದುಕಿನ ಭಾಷೆ, ನಾಡಿನ ಭಾಷೆಯಾಗಿ ಶಕ್ತಿಯುತವಾಗಿ ಬೆಳೆಯುತ್ತಿದೆ ಎಂದು ಲೇಖಕಿ ಶೈಲಾ ನಾಗರಾಜ್ ಹೇಳಿದರು.
ತುಮಕೂರಿನ ಕನ್ನಡ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ಕವಿಗೋಷ್ಠಿ ಹಾಗೂ ಉರ್ದು ಶಾಲೆಗಳಲ್ಲಿ ಏರ್ಪಡಿಸಿದ್ದ ಕನ್ನಡ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡವನ್ನು ಬೆಳೆಸಬೇಕು. ಅದಕ್ಕಾಗಿ ಕನ್ನಡವನ್ನು ಮಾತನಾಡಬೇಕು. ಆಗ ಮಾತ್ರ ಕನ್ನಡ ಭಾಷೆ ಬೆಳೆಯುತ್ತದೆ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ ಎಂದು ತಿಳಿಸಿದರು.
ಕನ್ನಡ ಭಾಷೆ ಉಪನ್ಯಾಸಕರಿಂದಲೋ, ವಿಶ್ವವಿದ್ಯಾಲಯಗಳಿಂದಲೋ ಬೆಳೆಯುತ್ತಿಲ್ಲ. ಅದು ಗ್ರಾಮೀಣ ಭಾಗದ ಜನರು ಮತ್ತು ಕಾರ್ಮಿಕರು ಕನ್ನಡ ಬಳಸುತ್ತಿರುವುದರಿಂದ ಕನ್ನಡ ಭಾಷೆ ಬೆಳೆಯುತ್ತಿದೆ ಎಂದರು.
ಕಲೇಸಂ ಜಿಲ್ಲಾಧ್ಯಕ್ಷೆ ಜಿ.ಮಲ್ಲಿಕಾ ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಡಾ.ಗೀತಾ ವಸಂತ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಟಿ.ಆರ್.ಲೀಲಾವತಿ, ಲೇಖಕಿ ಸಿ.ಎನ್. ಸುಗುಣಾ ದೇವಿ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಫರ್ಹಾನ ಬೇಗಂ, ಲೇಖಕಿ ಸಿ.ಎ. ಇಂದಿರಾ ಇದ್ದರು.