ತುಮಕೂರಿನ ವಿಶ್ವಭಾರತಿ ವಸತಿ ಶಾಲೆಯ 48 ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪಿ ಭರತ್ ನನ್ನುಕೂಡಲೇ ಬಂಧಿಸಬೇಕು. ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ಚಿಕಿತ್ಸಾ ವೆಚ್ಚವನ್ನು ವಸತಿ ಶಾಲೆಯ ಆಡಳಿತ ಮಂಡಳಿಯೇ ಭರಿಸಬೇಕು ಎಂದು ಎಸ್ಎಫ್ಐ ಆಗ್ರಹಿಸಿದೆ.
ಎಸ್ಎಫ್ಐ ಜಿಲ್ಲಾಧ್ಯಕ್ಷ ಈ. ಶಿವಣ್ಣ ಮಾತನಾಡಿ, ವಸತಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಪುತ್ರ ಭರತ್, 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ಷ್ಮಣ್ ಎಂಬ ವಿದ್ಯಾರ್ಥಿಗೆ ಕೈ ಮುರಿದು ಹಾಕಲಾಗಿದೆ. ರಾಘವೇಂದ್ರ ಎಂಬ ವಿದ್ಯಾರ್ಥಿಯ ಕಾಲು ಮತ್ತು ಕೈ ಮುರಿಯಲಾಗಿದೆ. ಏಳನೇ ತರಗತಿ ವಿದ್ಯಾರ್ಥಿಯ ಸೊಂಟವನ್ನು ಮುರಿಯಲಾಗಿದ್ದು ಈ ಮೂವರು ವಿದ್ಯಾರ್ಥಿಗಳು ನೋವು ಅನುಭವಿಸುವಂತೆ ಆಗಿದೆ. ಹಾಗಾಗಿ ಇವರ ಚಿಕಿತ್ಸೆ ವೆಚ್ಚವನ್ನು ಆಡಳಿತ ಮಂಡಳಿಯೇ ಭರಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಬೆಲ್ಟ್ ಮತ್ತು ತೆಂಗಿನ ಮಟ್ಟೆಯಿಂದ ಥಳಿಸಿ ಹಲ್ಲೆ ಮಾಡಿರುವ ಆರೋಪಿ ಭರತ್ ತಲೆಮರೆಸಿಕೊಂಡಿದ್ದು ಘಟನೆ ನಡೆದು ಮೂರ್ನಾಲ್ಕು ದಿನಗಳಾದರೂ ಆರೋಪಿಯನ್ನು ಬಂಧಿಸಿಲ್ಲ. ಕೂಡಲೇ ಹಲ್ಲೆಕೋರನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಶಿವಣ್ಣ ಆಗ್ರಹಿಸಿದ್ದಾರೆ.
ವಿಶ್ವಭಾರತಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 48 ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು ಪೋಷಕರು ಈ ಘಟನೆಯಿಂದ ಭಯಭೀತರಾಗಿದ್ದಾರೆ. ಹೀಗಾಗಿ ಮಕ್ಕಳನ್ನು ತಮ್ಮ ಊರುಗಳಿಗೆ ಕರೆದುಕೊಂಡು ಹೋಗುತ್ತಿದ್ದು, ಸರ್ಕಾರ ಈ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಥಳೀಯ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಘಟನೆ ನಡೆದು ಮೂರ್ನಾಲ್ಕು ದಿನವಾದರೂ ಹಲ್ಲೆ ನಡೆಸಿರುವ ವಿಷಯ ಬಹಿರಂಗಗೊಂಡಿಲ್ಲ. ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ಹೊರಗಿನಿಂದ ರೌಡಿಗಳನ್ನು ಕರೆಸಿ ಧಮ್ಕಿ ಹಾಕಿಸಲಾಗಿದೆ. ಈ ಕೃತ್ಯವನ್ನು ಎಸ್ಎಫ್ಐ ಖಂಡಿಸುತ್ತದೆ. ಅಷ್ಟೇ ಅಲ್ಲ ರೌಡಿಗಳ ವಿರುದ್ಧ ಕ್ರಮವ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಹಲ್ಲೆಯ ಘಟನೆಯಿಂದ ಭೀತರಾಗಿರುವ ವಿದ್ಯಾರ್ಥಿಗಳು ವರ್ಗಾವಣೆ ಪತ್ರಗಳನ್ನು ತೆಗೆದುಕೊಂಡು ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಹಾಗಾಗಿ ಅಂಥ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಯಾವುದೇ ತೊಂದರೆಯಾಗದಂತೆ ವಿದ್ಯಾರ್ಥಿಗಳ ಜೊತೆಗೆ ಸಂಘಟನೆ ಇರುತ್ತದೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಇದುವರೆಗೂ ಬಂಧಿಸಿಲ್ಲ ಎಂದು ಆರೋಪಿಸಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಈ ಶಿವಣ್ಣ ನೇತೃತ್ವದ ನಿಯೋಗದಲ್ಲಿ ಮಲ್ಲಸಂದ್ರಕ್ಕೆ ತೆರಳಿ ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದೇವೆ. ವಿದ್ಯಾರ್ಥಿಗಳ ನೆರವಿಗೆ ಎಸ್ಎಫ್ಐ ನಿಲ್ಲಲಿದೆ ಎಂದು ಭರವಸೆ ನೀಡಿದರು. ನಿಯೋಗದಲ್ಲಿ ನಗರ ಅಧ್ಯಕ್ಷ ಶಶಿ ವರ್ಧನ್, ಸಿಂಚನ, ಚಂದ್ರಿಕಾ, ನಿಂಗಾನಾಯ್ಕ್, ಕುಬೇರ್ ನಾಯ್ಕ್, ರಾಜಾ ನಾಯ್ಕ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.


