Friday, October 18, 2024
Google search engine
Homeಮುಖಪುಟಚಿಲುಮೆ ಸಂಸ್ಥೆಗೆ ಹಣ ನೀಡಿದವರ ಮೇಲೆ ಯಾಕೆ ಐಟಿ ದಾಳಿ ನಡೆಸಿಲ್ಲ? - ಸಿದ್ದರಾಮಯ್ಯ ಪ್ರಶ್ನೆ

ಚಿಲುಮೆ ಸಂಸ್ಥೆಗೆ ಹಣ ನೀಡಿದವರ ಮೇಲೆ ಯಾಕೆ ಐಟಿ ದಾಳಿ ನಡೆಸಿಲ್ಲ? – ಸಿದ್ದರಾಮಯ್ಯ ಪ್ರಶ್ನೆ

ಚಿಲುಮೆ ಸಂಸ್ಥೆಯ ಅಕ್ರಮಗಳ ಹಿಂದಿನ ರೂವಾರಿಗಳ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ? ಇಷ್ಟು ದಿನವಾದರೂ ಈ ಅಕ್ರಮ ಸಂಸ್ಥೆಯ ಹಣಕಾಸಿನ ವಹಿವಾಟಿನ ಮೇಲೆ ಈ ಸಂಸ್ಥೆಗೆ ಹಣ ನೀಡಿದವರ ಮೇಲೆ ಯಾಕೆ ಸಿಬಿಐ, ಐಟಿ, ಇಡಿ ದಾಳಿ ನಡೆಸಿಲ್ಲ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಖಾಸಗಿ ಸಂಸ್ಥೆ ಚಿಲುಮೆಗೆ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೆ ವಹಿಸಿದ್ದರ ಹಿಂದೆ ಬಿಬಿಎಂಪಿ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳೂ ಇದ್ದಾರೆ. ಚುನಾವಣಾ ಆಯೋಗಕ್ಕೆ ಈ ಕುರಿತು ಮೊದಲೇ ಮಾಹಿತಿ ಇತ್ತು. ಚುನಾವಣಾ ಆಯೋಗದವರು ಬಿಬಿಎಂಪಿಗೆ ಈ ಕುರಿತು ಪತ್ರಗಳನ್ನೂ ಬರೆದಿದ್ದರು. ಆದರೂ ಆಯೋಗಕ್ಕೂ ಕೇರ್ ಮಾಡದೆ ಚಿಲುಮೆ ಸಂಸ್ಥೆಯ ಅಕ್ರಮ ಹೆಚ್ಚಾಗುತ್ತಾ ಹೋಗಿದೆ. ಹಾಗಾಗಿ ಚುನಾವಣಾ ಆಯೋಗ ಈ ಅಕ್ರಮಕ್ಕೆ ಮೌನ ಸಮ್ಮತಿ ನೀಡಿದೆಯೆ? ಸುಪ್ರೀಂ ಕೋರ್ಟು ಚುನಾವಣಾ ಆಯೋಗದ ಮೇಲೆ ಮಾಡಿರುವ ವಿಮರ್ಶೆಗಳು ಸರಿಯಾಗಿವೆ ಅಲ್ಲವೆ? ಎಂದು ಕೇಳಿದ್ದಾರೆ.

ಹೊಂಗಸಂದ್ರದ ಬಿಜೆಪಿಯ ಕಛೇರಿಯಲ್ಲಿ ಹಾಲಿ ಶಾಸಕರು ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಸತೀಶ್‍ರೆಡ್ಡಿ ನೇತೃತ್ವದಲ್ಲಿಯೇ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುವ ಕುರಿತು ತರಬೇತಿ ನೀಡಲಾಗಿದೆ ಎಂದು ಆರೋಪಿಸಿದರು.

ಪರಿಷ್ಕರಣೆ ಕಾರ್ಯಕ್ಕಾಗಿಯೆ 25000 ದಿಂದ 30000 ರೂಪಾಯಿಗಳನ್ನು ನೀಡಿ ನೇಮಕಾತಿ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಣದ ಮೂಲದ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ನೂರಾರು ಸಂಖ್ಯೆಯ ನೌಕರರಿಗೆ ಸಂಬಳ ಕೊಡಲು ಖರ್ಚು ಮಾಡಿದ ಕೋಟ್ಯಾಂತರ ರೂಪಾಯಿಗಳನ್ನು ಈ ಸಂಸ್ಥೆಗೆ ನೀಡಿದವರು ಯಾರು? ಇಷ್ಟು ದೊಡ್ಡ ಮೊತ್ತವನ್ನು ವಿನಿಯೋಗಿಸುತ್ತಿದ್ದವರ ಉದ್ದೇಶವಾದರೂ ಏನು? ಅಕ್ರಮವಾಗಿ ವಿನಿಯೋಗಿಸಿದ ಹಣದ ಕುರಿತು ಇನ್ನೂ ದಾಳಿಗಳನ್ನು ನಡೆಸದೆ ಐಟಿ, ಇಡಿಗಳು ಯಾಕೆ ಇನ್ನೂ ಕಣ್ಣು ಮುಚ್ಚಿಕೊಂಡಿವೆ ? ಎಂದು ಕೇಳಿದ್ದಾರೆ.

ಬಿಬಿಎಂಪಿಯಲ್ಲಿ ನಡೆದಿರುವ ಮತದಾರರ ಪಟ್ಟಿಯ ಅಕ್ರಮಕ್ಕೆ ಸರ್ಕಾರ, ಚುನಾವಣಾ ಆಯೋಗ ಮತ್ತು ಬಿಬಿಎಂಪಿಯ ಜಿಲ್ಲಾ ಚುನಾವಣಾಧಿಕಾರಿ, ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಸಂಪೂರ್ಣ ಜವಾಬ್ಧಾರರಾಗಿರುತ್ತಾರೆ ಎಂದು ಹೇಳಿದ್ದಾರೆ.

ಆದರೂ ಇಷ್ಟು ಬೃಹತ್ ಮಟ್ಟದ ಹಗರಣ ನಡೆದಿದ್ದರೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಯಾಕೆ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ? ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವ ಬಿಜೆಪಿಯ ಎಂಎಲ್‍ಎಗಳು, ಸಚಿವರುಗಳ ಮೇಲೆ ಮತ್ತು ಬೆಂಗಳೂರು ಅಭಿವೃದ್ಧಿಯ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿಗಳ ಮೇಲೆ ಏಕೆ ಯಾವುದೇ ಕ್ರಮ ವಹಿಸಿಲ್ಲ? ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular