ಮತದಾರರ ಮಾಹಿತಿ ಕಳವು ಪ್ರಕರಣದ ವಿಚಾರವಾಗಿ ನಾವು ಕೇಂದ್ರ ಚುನಾವಣಾ ಆಯೋಗಕ್ಕೇ ದೂರು ನೀಡಿದ್ದು, ಅದು ಉಪ ಆಯುಕ್ತರನ್ನು ತನಿಖೆಗೆ ನೇಮಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತನಿಖಾಧಿಕಾರಿಗಳು ಬೊಮ್ಮಾಯಿ ನೇತೃತ್ವದ ಸರ್ಕಾರದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಸೇರಿ ಅಕ್ರಮ ನಡೆಸಿದ್ದಾರೆ ಎಂದು ಕೆಲವು ಚುನಾವಣಾ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎಂದು ಹೇಳಿದರು.
ಸರ್ಕಾರ ತನ್ನ ಬಳಿ ಇಲ್ಲದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು 7-8 ಸಾವಿರ ಬಿಎಲ್ಒ ಗಳನ್ನು ನೇಮಿಸಿ, ಮತದಾರ ಮಾಹಿತಿ ಕದಿಯಲು ಪ್ರಯತ್ನಿಸಿದೆ. ಬಿಜೆಪಿಗೆ ಅನುಕೂಲವಾಗುವಂತೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಕಾನೂನು ಬಾಹಿರವಾಗಿ ಕಲೆ ಹಾಕಿರುವ ಮಾಹಿತಿಯನ್ನು ಹಿಂಪಡೆಯಬೇಕು ಎಂದು ಆಯೋಗ ಆದೇಶ ನೀಡಿದೆ. ಈ ಮಾಹಿತಿಗಳು ಖಾಸಗಿ ಸಂಸ್ಥೆಗಳು ಹಾಗೂ ಟ್ರಸ್ಟ್ ಹಾಗೂ ಬಿಜೆಪಿ ನಾಯಕರ ಬಳಿ ಇವೆ ಎಂದು ಆರೋಪಿಸಿದರು.
ಇದು ಕ್ರಿಮಿನಲ್ ಅಪರಾಧವಾಗಿದ್ದು, ಇದರಲ್ಲಿ ಯಾರೆಲ್ಲಾ ಭಾಗಿ ಆಗಿದ್ದಾರೆ, ಯಾರೆಲ್ಲಾ ದೂರವಾಣಿ ಸಂಪರ್ಕ ಹೊಂದಿದ್ದಾರೆ ಎಂದು ತನಿಖೆ ಮಾಡಬೇಕು. ಕೆಲವು ಬಿಜೆಪಿ ಶಾಸಕರು ದೊಡ್ಡ ಅಭಿಯಾನದ ಮೂಲಕ ಈ ಮಾಹಿತಿ ಕಳವು ಮಾಡಲು ಪ್ರೋತ್ಸಾಹ ನೀಡಿದ್ದಾರೆ. ಹಣ, ಚೆಕ್ ನೀಡಿರುವ ದಾಖಲೆ ಕೂಡ ಇದೆ ಎಂದರು.
ಮತದಾರರಲ್ಲಿ ಜಾಗೃತಿ ಮೂಡಿಸುವ, ಪಾಲಿಕೆ ಹೆಸರಿನಲ್ಲಿ ಈ ಅಕ್ರಮ ನಡೆದಿದೆ. ರಾಜ್ಯದ ಇತಿಹಾಸದಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಕ್ರಮ ಆಗಿದೆ ಎಂದು ಟೀಕಿಸಿದರು.
ನಿಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳುವ ಕೆಲಸ ಮಾಡಿ ಎಂದು ನಾನು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇನೆ. ಈ ಅಕ್ರಮ ಕೇವಲ 3 ಕ್ಷೇತ್ರದಲ್ಲಿ ಮಾತ್ರವಲ್ಲ, ಬೆಂಗಳೂರಿನ 28 ಕ್ಷೇತ್ರಗಳಲ್ಲಿ, ರಾಜ್ಯದ 224 ಕ್ಷೇತ್ರಗಳಲ್ಲಿ ನಡೆದಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಮತ ತೆಗೆಯುವ ಪ್ರಯತ್ನ ನಡೆದಿದೆ. ಈ ಬಗ್ಗೆ ಜನ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.