ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದರೆ ಬಸವರಾಜ ಬೊಮ್ಮಾಯಿ ಮಾತ್ರ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.
ಕನ್ನಡಿಗರ ಮೇಲೆ ಗೋವಾ ಸವಾರಿ ಮಾಡಿದರೂ, ಮಹಾರಾಷ್ಟ್ರ ನಮ್ಮ ನೆಲಕ್ಕೆ ಕನ್ನ ಹಾಕಿದರೂ, ತೆಲಂಗಾಣ ರಾಯಚೂರಿಗೆ ಕೈ ಹಾಕಿದರೂ ಮೂಕ ಬಸವನಂತೆ ಇರುತ್ತಾರೆ ಮುಖ್ಯಮಂತ್ರಿಗಳು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಕೇಂದ್ರದಲ್ಲಿ, ಗೋವಾದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಮೂರು ಇಂಜಿನ್ ಸರ್ಕಾರಗಳು ಸವಾರಿ ಮಾಡುತ್ತಿದ್ದರೂ ಸುಮ್ಮನಿದ್ದಾರೆ ಎಂದು ಆಪಾದಿಸಿದೆ.
ರಾಷ್ಟ್ರಧ್ವಜಕ್ಕಿಂತ ಯಾರೂ ಮೇಲಲ್ಲ. ಆದರೆ ಬಿಜೆಪಿ ಮಾತ್ರ ರಾಷ್ಟ್ರಧ್ವಜಕ್ಕಿಂತ ಭಗವಧ್ವಜ, ಬಿಜೆಪಿ ಧ್ವಜವೇ ಮೇಲು ಎಂದು ವರ್ತಿಸುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಸಚಿವ ಶ್ರೀರಾಮುಲು ಅವರು ರಾಷ್ಟ್ರಧ್ವಜಕ್ಕಿಂತ ನಾನೇ ಮೇಲು ಎನ್ನುತ್ತಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಕನಿಷ್ಠ ಗೌರವ ಹೊಂದಿರದ ಬಿಜೆಪಿಗರ ನಕಲಿ ದೇಶಭಕ್ತಿ ಹೀಗೆ ಅನಾವರಣ ಆಗುತ್ತಲೇ ಇರುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.