ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಮತ್ತು ಮಾಜಿ ಬಿ.ಸುರೇಶ್ ಗೌಡ ಅವರ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಉಭಯ ಮುಖಂಡರೂ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಇತ್ತೀಚೆಗೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಶಾಸಕ ಗೌರಿಶಂಕರ್ ತಮ್ಮನ್ನು ಹತ್ಯೆ ಮಾಡಲು ಜೈಲಿನಲ್ಲಿರುವ ಆರೋಪಿಗಳಿಗೆ ಸುಫಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು.
ಹಾಗಾಗಿ ಸುರೇಶ್ ಗೌಡ ಅವರು ಮಾಡಿದ ಭಾಷಣದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಲಿ ಶಾಸಕ ಗೌರಿಶಂಕರ್, ಸಾರ್ವಜನಿಕ ಸಮಾರಂಭವೊಂದರಲ್ಲಿ ತಮ್ಮ ವಿರುದ್ಧ ಕೊಲೆ ಆರೋಪ ಮಾಡಿರುವುದರ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಮಾಜಿ ಶಾಸಕ ಬಿ.ಸುರೇಶ್ ಗೌಡ ಮಾಡಿರುವ ಆರೋಪದಿಂದ ತಮ್ಮ ಘನತೆಗೆ ಚ್ಯುತಿ ತರುವ ಕೆಲಸ ನಡೆದಿದೆ. ಹೀಗಾಗಿ ಕೂಡಲೇ ನಿಷ್ಪಕ್ಷಪಾತ ತನಿಖೆಯನ್ನು ನಡೆಸಿ ಮಾಜಿ ಶಾಸಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಜನರ ಮನಸ್ಸನ್ನು ತಮ್ಮೆಡೆಗೆ ಸೆಳೆಯುವ ಉದ್ದೇಶದಿಂದ ಮಾಜಿ ಶಾಸಕ ಸುರೇಶ್ ಗೌಡ ಈ ರೀತಿಯ ಕುತಂತ್ರವನ್ನು ನಡೆಸುತ್ತಿದ್ದಾರೆ. ಕ್ಷೇತ್ರದ ಜನರಿಗೆ ನಿಜ ಏನೆಂಬುದು ಗೊತ್ತು. ಆದ್ದರಿಂದ ಇಂತಹ ಆರೋಪಗಳಿಗೆ ಯಾರೂ ಬೆಲೆ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳು, ಗೃಹಸಚಿವರು ಮತ್ತು ಬಿಜೆಪಿ ನಾಯಕರಿಗೆ ಮನವಿ ಸಲ್ಲಿಸುತ್ತೇನೆ. ರಾಜ್ಯ ಮತ್ತು ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಹಾಗಾಗಿ ಈ ಬಗ್ಗೆ ಸಿಬಿಐ ತನಿಖೆ ನಡೆಸಲಿ ಎಂದು ತಿಳಿಸಿದ್ದಾರೆ.