ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ದಿಬ್ಬೂರಿನಲ್ಲಿ ಗೃಹಭಾಗ್ಯ ಯೋಜನೆಯಡಿ ಪಾಲಿಕೆಯಿಂದ ಪೌರಕಾರ್ಮಿಕರಿಗೆ ನಿರ್ಮಿಸಲಾಗಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಸ್ಥಳೀಯ ಆಡಳಿತ ಮೀನಾ ಮೇಷ ಎಣಿಸುತ್ತಿದೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅತಿಕ್ ಅಹಮ್ಮದ್ ಆರೋಪಿಸಿದ್ದಾರೆ.
ದಿಬ್ಬೂರಿನಲ್ಲಿ ತುಮಕೂರು ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರಾಗಿ ಅಂದಾಜು 538.50 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮನೆ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಕೂಡಲೇ ಸಂಬಂಧಪಟ್ಟ ಪೌರಕಾರ್ಮಿಕರಿಗೆ ಮನೆಗಳನ್ನು ಹಸ್ತಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆರು ವರ್ಷಗಳಿಂದ ಮನೆ ನಿರ್ಮಿಸುತ್ತಿರುವ ಕಾಮಗಾರಿ ಕುಂಟುತ್ತಾ ಸಾಗಿದೆ. ಇದನ್ನು ನೋಡಿದರೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಪೌರಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ. ನಿರ್ಮಾಣವಾಗಿರುವ ಮನೆಗಳನ್ನು ವಾಸಕ್ಕೆ ನೀಡದೆ ಮನೆಗಳ ಕಿಟಕಿ ಬಾಗಿಲುಗಳು ಒಡೆದು ಹೋಗಿವೆ. ಆದ್ದರಿಂದ ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ಮನೆಗಳನ್ನು ನೀಡಿ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿಯ ಹೆಸರು ಹೇಳುತ್ತಿರುವ ಆಡಳಿತ ಪಕ್ಷದ ಶಾಸಕರು ಮತ್ತು ಸಂಸದರು ಕೇವಲ ಒಣ ಭಾಷಣ ಮಾಡುತ್ತಾರೆಯೇ ಹೊರತು ಬಡವರ ಪೌರಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ. ಕಳೆದ ಆರು ವರ್ಷಗಳಿಂದ ಮನೆಗಳನ್ನು ವಿತರಿಸದೆ ಇರುವುದು ಖಂಡನೀಯ ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ ಎನ್ ರಾಮಯ್ಯ ಮಾತನಾಡಿ, ನಿವೇಶನ ಖರೀದಿ ಮಾಡಿ ಆರು ವರ್ಷ ಕಳೆದರೂ ಮನೆಗಳನ್ನು ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅನೇಕ ಸಭೆಗಳು ನಡೆದಿದ್ದರೂ ತುಮಕೂರಿನ ದಿಬ್ಬೂರಿನಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ಹಸ್ತಾಂತರ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.