ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆಯಿಂದ ತೆಗೆದುಹಾಕುವ ಸುಗ್ರೀವಾಜ್ಞೆಗೆ ಸಹಿ ಹಾಕದೆ ವಾಪಸ್ ಕಳುಹಿಸಿದ್ದಾರೆ.
ಡಿಸೆಂಬರ್ 5 ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಕಾನೂನು ತರುವುದಾಗಿ ಸರ್ಕಾರ ಸ್ಪಷ್ಟಪಡಿಸಿದ್ದರಿಂದ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ಹಿಂದಿರುಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಅಪ್ರಸ್ತುತ ಎಂದು ರಾಜ್ಯಪಾಲರು ಹೇಳಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಈ ನಡುವೆ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ಹಿಂದಿರುಗಿಸುವುದರಲ್ಲಿ ಅಸಹಜವಾದದ್ದೇನೂ ಇಲ್ಲ ಎಂದು ಕೇರಳ ವಿಧಾನಸಭಾ ಸ್ಪೀಕರ್ ಎ.ಎನ್. ಶಂಸೀರ್ ಹೇಳಿದ್ದಾರೆ.
ಕುಲಾಧಿಪತಿಯಾಗಿ ತಮ್ಮ ಅಧಿಕಾರವನ್ನು ಮೊಟಕುಗೊಳಿಸುವ ಸುಗ್ರೀವಾಜ್ಞೆಗೆ ಸಹಿ ಹಾಕುವುದಿಲ್ಲ ಎಂದು ರಾಜ್ಯಪಾಲರು ತಮ್ಮ ನಿಲುವಿನಲ್ಲಿ ದೃಢವಾಗಿದ್ದಾರೆ. ಈ ಹಿಂದೆ ಎಲ್.ಡಿ.ಎಫ್ ಸರ್ಕಾರಕ್ಕೆ ಧಿಕ್ಕಾರದ ಹೇಳಿಕೆ ನೀಡಿದ ರಾಜ್ಯಪಾಲರು ಕುಲಾಧಿಪತಿ ಹುದ್ದೆಯು ರಾಜ್ಯ ಸರ್ಕಾರ ನೀಡಿಲ್ಲ. ಆದರೆ ರಾಷ್ಟ್ರಮಟ್ಟದಲ್ಲಿ ಒಮ್ಮತದ ಪ್ರಕಾರ ಎಂದು ಸಮರ್ಥಿಸಿಕೊಂಡಿದ್ದರು.
ಶಾಸಕಾಂಗ ಸಭೆಯು ಅಂಗೀಕರಿಸುವ ಮಸೂದೆ ಮತ್ತು ಅವರ ಮುಂದೆ ಬಾಕಿ ಇರುವ ಇತರೆ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕುತ್ತಾರೆ ಎಂದು ಶಂಸೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.