Friday, October 18, 2024
Google search engine
Homeಜಿಲ್ಲೆಕೆ.ಬಿ ಅವರ ದಕ್ಲಕಥಾ ದೇವಿ ಕಾವ್ಯ ನಾಟಕದ ವಿಮರ್ಶೆ

ಕೆ.ಬಿ ಅವರ ದಕ್ಲಕಥಾ ದೇವಿ ಕಾವ್ಯ ನಾಟಕದ ವಿಮರ್ಶೆ

ತುಮಕೂರಿನ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನವೆಂಬರ್ 19 ರಂದು ರಾತ್ರಿ ಸಾಹಿತಿ ಕೆ.ಬಿ.ಸಿದ್ದಯ್ಯ ಅವರು ಬರೆದಿರುವ ದಕ್ಲಕಥಾ ದೇವಿ ಕಾವ್ಯದ ನಾಟಕ ಪ್ರದರ್ಶನ ನಡೆಯಿತು. ನಾಟಕದ ಕುರಿತು ಲೇಖಕ ನವೀನ್ ಭೂಮಿ ಅವರು ಬರೆದಿರುವ ಒಂದು ವಿಮರ್ಶೆ. ಈ ವಿಮರ್ಶೆಯನ್ನು ನವೀನ್ ಭೂಮಿ ಅವರ ಫೇಸ್ ಬುಕ್ ಖಾತೆಯಿಂದ ತೆಗೆದುಕೊಂಡಿರುವುದು.

ಇನ್ನೂ ಗೂಟ-ಮೊಳೆ-ರಕ್ತ

ಕುಡುದ್ಯಾ, ಉಂಡ್ಯಾ, ಮಲೀಕಾ

ಕುಡುದ್ಯಾ, ಉಂಡ್ಯಾ, ಮಲೀಕಾ

ಕಟ್ಟಕಡೇಯ ಸಮುದಾಯಗಳ ತೀವ್ರವಾದ ನೋವು, ಸಂಕಟ, ಅಸಹಾಯಕತೆ, ಹಸಿವು, ಆಚರಣೆ, ಸಂಸ್ಕೃತಿಗಳ ಚಿತ್ರಣವನ್ನು ಕಣ್ಣಮುಂದೆ ತರುವಂತಹ ನಾಟಕವೇ ಈ ದಕ್ಲಕಥಾ.

ಕೆ.ಬಿ ಸಿದ್ದಯ್ಯ ಅವರ ಕಾವ್ಯಾಧಾರಿತ ಈ ನಾಟಕ ಎಷ್ಟರ ಮಟ್ಟಿಗೆ ಕಾಡಿತು ಅಂದರೆ ಹೇಳ ತೀರದು. ಮುಖ್ಯವಾಗಿ ಎರಡು ವಾದ್ಯಗಳನ್ನು ನಾಟಕದುದ್ದಕ್ಜೂ ಬಳಸಿಕೊಂಡು ನಾಟಕ ಕಟ್ಟಿರುವುದರಲ್ಲೇ ಗೊತ್ತಾಗುತ್ತದೆ ನಮ್ಮ ದನಿಯೇ ನಮಗೆ ಆಸರೆ ಎಂದು.

ದನಿ ನಮ್ಮೊಳಗೆ ಅಡಗಿದೆ, ಹೊರಗೆ ನಾದ ಹೊಮ್ಮುತಿದೆ, ನಾದ ನಿಮಗೆ ಇಂಪಾಗಿ ಕೇಳಿದರು ಅದರೋಳಗೆ ನಮ್ಮ ಬದುಕಿನ ಅಲೆಗಳು ಮೇಳೈಸಿವೆ, ಅವು ಎಂದಾದರೂಂದು ದಿನ ಕಂಪಿಸದೇ ಇರದು. ಅದು ಹೊಸ ಪರ್ವ ಉಂಟಾಗುತ್ತದೆ.

ಜಾಲಾರದ ಮರುದಾ..

ಕೊಂಬೆ ಕೊಂಬೆಗಳಲ್ಲಿ

ಜಂಗುಮರು ನೆಲೆಗೊಂಡವರೆ..

ಜಗವ ತೂಗುವ ದೇವಿ

ಮಗುವ ತೂಗವ ದೇವಿ

ನಿನ್ನ ಗರ್ಭದಲ್ಲಿ…

ನಿನ್ನ ಗರ್ಭದಲ್ಲಿ

ಮರಳಿ ನಮ್ಮ ಧರಿಸು

ನಮ್ಮನ್ನು ಕೈ ಹಿಡಿದು

ಯೋನಿ ಗುಹೆಯಿಂದ

ಧ್ಯಾನಿ ಗುಹೆಗೆ ನಡೆಸು..

ನಾಟಕ ನಿಧಾನವಾಗಿ ನಮ್ಮನ್ನು ಸೆಳೆಯುತ್ತಾ ಹೋಗತ್ತದೆ. ಹಸಿವು, ಸಂಕಟ, ನೋವು ಇವುಗಳನ್ನೇ ಹೊದ್ದು ಮಲಗಿರುವವರ ಕಥೆ ಇದು. ಇದರ ಬಿಡುಗಡೆಗೆ ತಾವು ನಂಬಿರುವ ದಕ್ಲಾ ದೇವಿಯೇ ಬರಬೇಕು ಎಂದು ಶುರುವಾಗುವ ನಾಟಕ ರಂಗದ ಮೇಲೆ ಹೊಸ ಜಗತ್ತನ್ನೇ ಬಿಚ್ಚುತ್ತಾ ಹೋಗುತ್ತದೆ.

ನಾಟಕ ಮಾಡುವವರು ನಾವು ನಾಟಕ ಮಾಡುತ್ತಿದ್ದೇವೆ ಎಂದು ತಮ್ಮ ಬದುಕನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತಾ ಹೋಗುತ್ತಾರೆ. ಅಲ್ಲಿ ಬರುವಂತಹ ಆಚರಣೆಗಳು, ಮಾತಿನ ವರಸೆ, ವಾದ್ಯಗಳ ಜುಗಲ್‍ಬಂಧಿ, ಇವುಗಳು ತಾನಾಗಿಯೇ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ.

ಕಟ್ಟ ಕಡೇಯ ಸಮುದಾಯಗಳ ಅಸಹಾಯಕತೆ, ಹಸಿವಿನ ತಲ್ಲಣಗಳನ್ನು ತಾವಾಡುವ ನಾಟಕದ ಮೂಲಕವೇ ನೋಡುಗರಿಗೆ ದಾಟಿಸುವ ಪ್ರಕ್ರಿಯೆ ಮನಕಲಕುವಂತಿದೆ. ಇಂತಹ ಸಮುದಾಯಗಳ ಆಚರಣೆಗಳು ಯಾಕೆಲ್ಲ ಆ ಮಟ್ಟಕ್ಕೆ ಶಕ್ತಿಶಾಲಿಯಾಗಿದ್ದವು ಎಂಬುದಕ್ಕೆ ಈ ನಾಟಕ ಉತ್ತರ ನೀಡುತ್ತದೆ ಎಂದೇ ಹೇಳಬಹುದು.

ಜೀತಕ್ಕೆ ಹೋದಂತ ಮಗನಿನ್ನು ಬರಲಿಲ್ಲ..

ಉರಿದೈತಿ ಆ ಒಂದು ಗುಡಿಸಲಾ ದೀಪ..

ಉರಿದೈತಿ ಆ ಒಂದು ಗುಡಿಸಾಲಾ ದೀಪ..

ನಾಟಕದಲ್ಲಿ ಬರುವಂತಹ ದೇವಿ ಪಾತ್ರದಲ್ಲಿ ಬಿಂದು ರಕ್ಷಿದಿಯವರು ಕಾಣುತ್ತಾರೆ, ಅವರು ರಂಗದ ಮೇಲೆ ಸಾಕ್ಷಾತ್ ದೇವಿಯೇ ಬಂದರೀತಿಯಲ್ಲಿ ಕಾಣುತ್ತಾರೆ. ಸಂತೋಷ್ ದಿಂಡಗೂರು ದಕ್ಲನ ಪಾತ್ರದಲ್ಲಿ ತನ್ನ ಸಮುದಾಯದ ಹಸಿವಿನ ಚಿತ್ರಣವನ್ನು ನಗು ನಗುತ್ತಾ, ಹಾಡುತ್ತಾ, ಕುಣಿಯುತ್ತಾ, ಒಮ್ಮೊಮ್ಮೆ ತನ್ನ ನೋವನ್ನು ನೆನೆದು ಬಿಕ್ಕುತ್ತಾ ನೋಡುಗರಿಗೆ ಮುಟ್ಟಿಸಿದ ಅದ್ಬುತ ನಟ. ತಮಟೆ ನುಡಿಸುತ್ತಾ ಪ್ರೇಕ್ಷಕರನ್ನು ಅತ್ತಾ ಇತ್ತಾ ಕದಲದೇ ಹಿಡಿದಿಟ್ಟುಕೊಂಡಿದ್ದ ಭರತ್ ಡಿಂಗ್ರಿ, ಅರೆ ವಾದ್ಯದಿಂದ ಇಡೀ ರಂಗ ಮಂದಿರವನ್ನು ಮೂಖ ವಿಸ್ಮತರನ್ನಾಗಿಸಿದ ಶಿರಾ ನರಸಿಂಹಮೂರ್ತಿ ಹಾಗೂ ಗಂಗಿ ಪಾತ್ರದಲ್ಲಿ ರಮಿಕ ಚೈತ್ರ ಎಲ್ಲರೂ ನಾಟಕ ಕಾವ್ಯವನ್ನು ರಂಗದ ಮೇಲೆ ಎಲ್ಲಿಯೂ ಸೋಲದಂತೆ ನೋಡಿಕೊಂಡಿದ್ದಾರೆ, ಹಾಗೂ ನಾಟಕ ಕಟ್ಟಿರುವ ಜಂಗಮ ತಂಡದರಿಗೆ ಹಾಗೂ ನಾಟಕವನ್ನು ಆಯೋಜಿಸುತ್ತಿರುವ ಎಲ್ಲಾ ಆಯೋಜಕರಿಗೂ ನನ್ನ ಅನಂತ ಅನಂತ ಅಭಿನಂದನೆಗಳು.

ಕಟ್ಟ ಕಡೇಯ ಸಮುದಾಯಗಳ ಇಂದಿನ ತಳಮಳ, ಸಂಕಟ, ಪರಿಸ್ಥತಿಯನ್ನು ಸೂಕ್ಷ್ಮವಾಗಿ ತೆರೆದಿಡುವಂತಹ ನಾಟಕ ದಕ್ಲಕಥಾ. ಬುದ್ಧ, ಬಸವ, ಗಾಂಧೀಜಿ, ಅಂಬೇಡ್ಕರ್, ಏಸು ಎಂಬ ದೊಡ್ಡ ದೊಡ್ಡ ಐಕಾನ್‍ಗಳನ್ನು ಈ ಕಾವ್ಯದಲ್ಲಿ ಲೀಲಾಜಾಲವಾಗಿ ಪೋಣಿಸಿರುವುದು ವಿಶೇಷವಾಗಿದೆ. ನಾಟಕ ತಮ್ಮ ಬದುಕ್ಕನ್ನೇ ತೆರೆದಿಡುತ್ತಾ ಸಮುದಾಯಗಳ ದೊಡ್ಡ ಮಟ್ಟದ ಚರಿತ್ರೆ, ಪರಿಸ್ಥಿತಿಯನ್ನು ಪ್ರೇಕ್ಷಕರಿಗೆ ದಾಟಿಸುತ್ತದೆ.

ಈ ದೇಹದಿಂದ ದೂರವಾದೆ

ಏಕೆ ಆತ್ಮವೇ ಈ ಸಾವು ನ್ಯಾಯವೇ..

ಎಂದು ಹಾಡುತ್ತ ಹಾಡುತ್ತಾ ನೋಡುಗರ ಆತ್ಮವನ್ನು ಎಚ್ಚರಿಸುವಂತಹ ಕೆಲಸವಾಗಿದೆ.

ನಾಟಕ ಕಟ್ಟುವಿಕೆಯಲ್ಲಿ ನಿರ್ದೇಶಕರ ಯಶಸ್ಸು ಎದ್ದು ಕಾಣುತ್ತದೆ. ಖಾಲಿ ರಂಗದಲ್ಲಿ ಒಂದು ನಾಟಕವಾಡುವವರ ಬದುಕನ್ನು ಚಿತ್ರಿಸುತ್ತಾ ಇಡೀ ಕಟ್ಟಕಡೇಯ ಸಮುದಾಯಗಳನ್ನು ಚಿತ್ರಿಸಿರುವುದು ಈ ನಾಟಕದ ಶಕ್ತಿ ಎಂದೇ ಹೇಳಬಹುದು.

ನಾಟಕದ ಕೊನೆಯಲ್ಲಿ ದೇವಿಯ ಹಿಂದೆ ದಕ್ಲ ಹೋಗುವ ದೃಶ್ಯ ರೂಪಕ “ಇನ್ನೂ ಈ ಕಟ್ಟ ಕಡೇಯ ಸಮುದಾಯಗಳಿಗೆ ಏಸುವಿಗೆ ಬಡಿದ ರೂಪದಲ್ಲಿಯೇ ಮೊಳೆಗಳನ್ನು ಹೋಡೆದಿದ್ದೀರಿ” ಬಿಡಿಸಲಾಗದಂತಹ ಸ್ಥಿತಿಯಲ್ಲಿ ಈ ಕಟ್ಟ ಕಡೇಯ ಸಮುದಾಯಗಳು ನರಳುತ್ತಿವೆ. ಬೃಹದಾಕಾರದ ಆಲದ ಮರಕ್ಕೆ ಗೆದ್ದಲು ಉಳುಗಳು ತೊಂದರೆಯಾಗಿವೆ. ಅತೀತವಾದ ಸಂಸ್ಕೃತಿ, ಚೈತನ್ಯ, ಕಲೆ ಇವುಗಳನ್ನು ರಕ್ತದಲ್ಲೇ ಬೇರೆಸಿಕೊಂಡು ಬದುಕುತ್ತಿರುವವರ ಬದುಕು ಗೆದಲು ಹಿಡಿದಿರುವುದು ಸೂಕ್ಷ್ಮವಾಗಿ ಕಾಣುತ್ತದೆ. ಬುಡ ಗಟ್ಟಿಗೊಳಿಸುವ ಕಾರ್ಯ ನಡೆಯಬೇಕಿದೆ. ಹೊಸ ನವೋದಯ ಮರಳಿ ಬರಲಿದೆ.

ಹಸಿವನ್ನು ನೀಗಿಸಲಾಗದೇ, ಅಕ್ಷರಗಳನ್ನು ಕಾಣದೇ, ಜಗತ್ತನ್ನು ತನ್ನ ಬೆರಗು ಕಣ್ಣುಗಳಿಂದ ನೋಡಲಾಗದೇ, ಕಾಣದ ಯಾವುದೋ ಒಂದು ವಿಚಿತ್ರ ಕೂಪದೊಳಗೆ ಹಾಕಿ ಅದರಿಂದ ಮೇಲೆದ್ದು ಬರದ ರೀತಿಯಲ್ಲಿ ಈ ಕಟ್ಟ ಕಡೇಯ ಸಮುದಾಯಗಳ ಸ್ಥಿತಿ, ಪರಿಸ್ಥಿತಿ ಭರಪೂರವಾಗಿ ಕಾಣುತ್ತದೆ.

ಇನ್ನು ಎಷ್ಟು ವರ್ಷಗಳು ಹೀಗೇ ಮೊಳೆ ಜಡಿದುಕೊಂಡು ಬೆನ್ನ ಮೇಲೆ ರಕ್ತವನ್ನು ಹರಿಸುತ್ತಾ ಊರೂರು ಅಲೆಯುವುದು ಎಂಬ ಪ್ರಶ್ನೇ ನಾಟಕದುದ್ದಕ್ಕೂ ಮೂಡುತ್ತಾ ಹೋಗುತ್ತದೆ.

ಈ ಮಣ್ಣ ಪದರ ಪದರ ಗುಣದೊಳಗೆ

ಕಂಡದ್ದು ಕಂಡಂತೆ

ಕಾಣೆದುದು ಕಂಡವರೆ

ಸಾವಿನ ಮನೆಯ ಜ್ಯೋತಿ ನೋಡಿದಿರಾ

ಆಕಾಶದಿಂದಿತ್ತಾ

ಪಾತಾಳದಿಂದಿತ್ತಾ

ಎದುರು ಬದುರು

ಎಣ್ಣೆಯೂ ಇಲ್ಲ

ಬತ್ತಿಯೂ ಇಲ್ಲ

ಉರಿಯುತ್ತಿರೆ

ಆಕಾಶ ಗಂಗೆ

ಪಾತಾಳ ಗಂಗೆ

ಎದೆ ಮೇಲೆ ತೇಲಿ ಉರಿಯೋ

ಪರಂಜ್ಯೋತಿ ನೋಡಿದಿರಾ

ಮುಟ್ಟಿ ನೋಡಿದಿರಾ

ಕುಲಗೆಟ್ಟು ನೋಡಿದಿರಾ

ಹುಟ್ಟಿದ ಬಳಿಕಾ…

ಕುಲಪಂಜರ ದಾಟುವುದೇ

ಗಾಯಕ್ಕೆ,

ರಣ ಗಾಯಕ್ಕೆ ಮುಲಾಮು..

ಈ ನಾಟಕ ನಮ್ಮ ನೆಲ ಸಂಸ್ಕøತಿಯ ನಾಟಕವಾಗಿದೆ. ಹಳ್ಳಿ ಹಳ್ಳಿಗಳಿಗೆ, ಮನೆ ಮನಗಳಿಗೆ ತಲುಪಬೇಕಾಗಿದೆ. ತಲುಪಿಸುವ ಅಗತ್ಯವು, ಹೋಣೆಯೂ ನಮ್ಮದೇ ಆಗಿದೆ. ನಾಟಕವನ್ನು ನೋಡಿ, ಹೊಸ ಹೊಸ ಬೇರುಗಳನ್ನು ಬೆರೆಯೋಣ.

– ನವೀನ ಭೂಮಿ, ಲೇಖಕರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular