ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಬುಡ ಅಲುಗಾಡುತ್ತಿದೆ. ಕೋಲಾರದಲ್ಲಿ ಸಾಕಷ್ಟು ಕಾಂಗ್ರೆಸ್ ನಾಯಕರು ಇದ್ದರೂ ಸಹ ಬುಡ ಅಲುಗಾಡುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಸರಿ ಮಾಡಲು ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬಂದಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿರುವ ಅವರು, ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಕಡಿಮೆ ಆಗುತ್ತಿದ್ದು ಸಿದ್ದರಾಮಯ್ಯ ಅವರನ್ನು ಬಲಿ ಕೊಡಲು ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ತಾಯಿ, ಅವಳಿ ಶಿಶುಗಳ ಮರಣ – ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ
ತುಮಕೂರಿನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಭಾರತೀ ನಗರದ ತಾಯಿ ಮತ್ತು ಎರಡು ಶಿಶುಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಈ ಸಂಬಂಧ ಇನ್ನೂ ತನಿಖೆ ನಡೆಯುತ್ತಿದೆ. ವರದಿ ಬಂದನಂತರ ಕ್ರಮ ಜರುಗಿಸಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದರು.
ತಾಯಿ ಕಳೆದುಕೊಂಡಿರುವ ಬಾಲಕಿಯನ್ನು ಸರ್ಕಾರದಿಂದ ನೋಡಿಕೊಳ್ಳಲಾಗುವುದು. ಆ ಬಾಲಕಿ ಹೆಸರಿಗೆ ಆರೋಗ್ಯ ಇಲಾಖೆಯಿಂದ 10 ಲಕ್ಷ ರೂಗಳನ್ನು ಎಫ್.ಡಿ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾಸ್ಪತ್ರೆಯಲ್ಲಿ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗುವುದು, ಈ ಮೂಲಕ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಅನುವು ಮಾಡಿಕೊಡಲಾಗುವುದು ಎಂದರು.
ವೈದ್ಯಕೀಯ ಸಂಘಕ್ಕೆ ವೈದ್ಯೆ ಡಾ.ಉಷಾ ಬರೆದಿರುವ ಪತ್ರದ ಕುರಿತು ಪ್ರತಿಕ್ರಿಯೆ ನೀಡಿದ ಸುಧಾಕರ್ ನಾವು ಯಾವುದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿಲ್ಲ. ಸಿಸಿಟಿವಿ ದೃಶ್ಯವನ್ನು ಆಧರಿಸಿ ಹಾಗೂ ಮಾಹಿತಿಯನ್ನು ಪಡೆದು ಕ್ರಮ ಕೈಗೊಂಡಿದ್ದು, ತನಿಖೆ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.