Tuesday, December 24, 2024
Google search engine
Homeಮುಖಪುಟಮತದಾರರ ಮಾಹಿತಿ ಕಳವು - ಮುಖ್ಯಮಂತ್ರಿ ರಾಜಿನಾಮೆ, ಬಂಧನಕ್ಕೆ ಕಾಂಗ್ರೆಸ್ ಆಗ್ರಹ

ಮತದಾರರ ಮಾಹಿತಿ ಕಳವು – ಮುಖ್ಯಮಂತ್ರಿ ರಾಜಿನಾಮೆ, ಬಂಧನಕ್ಕೆ ಕಾಂಗ್ರೆಸ್ ಆಗ್ರಹ

‘ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡುವ ಮೂಲಕ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಮಾಹಿತಿ ಕಳುವಿಗೆ ಕಾರಣವಾಗಿರುವ ಬೆಂಗಳೂರು ನಗರದ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ವಿರುದ್ಧ ಎಫ್ಐಆರ್ ದಾಖಲಾಗಿ, ಅವರ ಬಂಧನವಾಗಬೇಕು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜಿವಾಲ, ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ತುರ್ತು ಮಾಧ್ಯಮಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು, ಮತದಾರರ ಮಾಹಿತಿ ಕಳವು ಪ್ರಕರಣದ ಬಗ್ಗೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದಾರೆ.

‘ಚಿಲುಮೆ ಎಜುಕೇಶನ್ ಇನ್ಸ್ ಟಿಟ್ಯೂಟ್ ಎಂಬ ಖಾಸಗಿ ಸಂಸ್ಥೆ ಮತದಾರರ ಜಾಗೃತಿ ಹಾಗೂ ಮತದಾರರ ಪಟ್ಟಿಯನ್ನು ಉಚಿತವಾಗಿ ಪರಿಷ್ಕರಣೆ ಮಾಡುತ್ತೇವೆ ಎಂದು ಆಗಸ್ಟ್ 19, 2022 ರಂದು ಸರಕಾರಕ್ಕೆ ಅರ್ಜಿ ಹಾಕಿದ್ದರು. ಆಗಸ್ಟ್ 20 ರಂದು ಯಾವುದೇ ಜಾಹೀರಾತು ನೀಡದೆ ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ನೀಡಲಾಯಿತು. ಈ ಸಂಸ್ಥೆಯವರಿಗೆ ಯಾವುದೇ ಅನುಭವ ಇಲ್ಲದಿದ್ದರೂ ಅನುಮತಿ ನೀಡಲಾಗಿದೆ. ಜನರ ಮಾಹಿತಿ ಪಡೆಯಲು ತಮ್ಮ ಸಿಬ್ಬಂದಿಗೆ ಬೂತ್ ಮಟ್ಟದ ಅಧಿಕಾರಿ ಎಂಬ ಗುರುತಿನ ಚೀಟಿ ನೀಡಿದ್ದಾರೆ. ಕಾನೂನಿನ ಪ್ರಕಾರ ಸರ್ಕಾರಿ, ಅರೆ ಸರ್ಕಾರಿ ಸಿಬ್ಬಂದಿ ಹೊರತಾಗಿ ಬೇರೆಯವರು ಬಿಎಲ್ಒ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಖಾಸಗಿ ಸಂಸ್ಥೆಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಯಾವುದೇ ಅನುಭವ ಇಲ್ಲದಿದ್ದರೂ ಉಚಿತವಾಗಿ ಜಾಗೃತಿ ಮೂಡಿಸುವುದಾಗಿ ತಿಳಿಸಿದೆ. ಇದರ ಜತೆಗೆ ಇನ್ನೆರಡು ಸಂಸ್ಥೆಗಳಾದ ಚಿಲುಮೆ ಎಂಟರ್ ಪ್ರೈಸಸ್ ಪ್ರೈ.ಲಿ ಹಾಗೂ ಡಿಎಪಿ ಹೊಂಬಾಳೆ ಪ್ರೈ.ಲಿ ಕೂಡ ಭಾಗಿಯಾಗಿದ್ದು, ಈ ಎರಡು ಸಂಸ್ಥೆಗಳಿಗೆ ಕೃಷ್ಣಪ್ಪ ರವಿಕುಮಾರ್ ಎಂಬುವವರು ನಿರ್ದೇಶಕರಾಗಿದ್ದಾರೆ. ಈ ಎರಡು ಸಂಸ್ಥೆಗಳು ಜನರ ಬಳಿ ಹೋಗಿ ನಾವು ಚುನಾವಣಾ ನಿರ್ವಹಣೆ ಕಂಪನಿಯಾಗಿದ್ದು, ನಾವು ಪಕ್ಷಗಳಿಗೆ ಇವಿಎಂ ತಯಾರಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ನಾವು ಇದುವರೆಗೂ ಇವಿಎಂ ಅನ್ನು ಸರ್ಕಾರ ಮಾಡಲಿದೆ ಎಂದು ಕೇಳಿದ್ದೆವು. ಆದರೆ ಇವಿಎಂ ಅನ್ನು ರಾಜಕೀಯ ಪಕ್ಷಗಳಿಗೆ ಮಾಡಲಾಗುತ್ತದೆ ಎಂದು ಯಾವತ್ತೂ ಕೇಳಿರಲಿಲ್ಲ ಎಂದಿದ್ದಾರೆ.

ಈ ಸಂಸ್ಥೆಗಳು ಸರ್ಕಾರದ ಎಲ್ಲಾ ವಿಭಾಗಗಳಿಂದಲೂ ತಾತ್ಕಾಲಿಕ ಮತಗಟ್ಟೆ ವ್ಯಕ್ತಿಯನ್ನು ಒದಗಿಸುವುದಾಗಿ ತಿಳಿಸಿವೆ. ಇದೇ ಸಂಸ್ಥೆ ಡಿಜಿಟಲ್ ಸಮೀಕ್ಷಾ ಎಂಬ ಮತದಾರರ ಆಪ್ ಅನ್ನು ಹೊಂದಿದೆ. ಈ ಆಪ್ ಮೂಲಕ ಜನಪ್ರತಿನಿಧಿಗಳಿಗೆ ಸೇವೆ ಒದಗಿಸಲಾಗುವುದು ಎಂದೂ ತಿಳಿಸಿದೆ.

ಬೆಂಗಳೂರಿನ ಎಲ್ಲ ಮತದಾರರ ಮಾಹಿತಿ ಪಡೆದ ನಂತರ ಈ ಸಂಸ್ಥೆ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿದೆ. ಚುನಾವಣಾ ಆಯೋಗ ನಿಯೋಜಿಸಬೇಕಿದ್ದ ಬೂತ್ ಮಟ್ಟದ ಅಧಿಕಾರಿಗಳನ್ನು ಈ ಸಂಸ್ಥೆ ನಿಯೋಜಿಸಿ ಅಕ್ರಮ ಎಸಗಿದೆ. ಇವರನ್ನು ಸರ್ಕಾರದ ಅಧಿಕಾರಿಗಳೆಂದು ಬಿಂಬಿಸಿ ಮನೆ, ಮನೆಗೂ ಹೋಗಿ ಪ್ರತಿ ಮತದಾರನ ಜಾತಿ, ಲಿಂಗ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಸೇರಿದಂತೆ ಅನೇಕ ಮಾಹಿತಿ ಕಲೆಹಾಕಲಾಗಿದೆ. ಹೀಗೆ ಕಲೆ ಹಾಕಿದ ಮಾಹಿತಿಯನ್ನು ಚುನಾವಣಾ ಆಯೋಗದ ಗರುಡ ಆಪ್ ನಲ್ಲಿ ಆಪ್ ಲೋಡ್ ಮಾಡದೇ, ಖಾಸಗಿ ಸಂಸ್ಥೆಯ ಆಪ್ ಆದ ಡಿಜಿಟಲ್ ಸಮೀಕ್ಷಾದಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂದರು.

ಆ ಮೂಲಕ ಎಂಪಿ, ಶಾಸಕರು, ಪಾಲಿಕೆ ಸದಸ್ಯರಿಗೆ ಸೇವೆ ಒದಗಿಸಿ ವ್ಯಾಪಾರ ಮಾಡಲು ಮುಂದಾಗಿದೆ. ಮೊದಲಿಗೆ ತಮ್ಮನ್ನು ಸರ್ಕಾರದ ಅಧಿಕಾರಿಗಳೆಂದು ಬಿಂಬಿಸಿಕೊಂಡರು. ಎರಡನೇಯದಾಗಿ ತಮ್ಮವರಿಗೆ ನಕಲಿ ಗುರುತಿನ ಚೀಟಿ ನೀಡಿದರು. ಮೂರನೆಯದಾಗಿ ಅಕ್ರಮವಾಗಿ ಮತದಾರರಿಂದ ಮಾಹಿತಿ ಕಲೆ ಹಾಕಿದ್ದಾರೆ. ನಾಲ್ಕನೆಯದಾಗಿ ಇದನ್ನು ಖಾಸಗಿ ಆಪ್ ನಲ್ಲಿ ಅಪ್ ಲೋಡ್ ಮಾಡಿ ಅದನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಈ ಮಾಹಿತಿಯನ್ನು ಬೇರೆ ಸಂಸ್ಥೆಗಳಿಗೂ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೃಷ್ಣಪ್ಪ ರವಿಕುಮಾರ್ ಎಂಬಾತ ಸರ್ಕಾರದ ಹಿರಿಯ ಸಚಿವರ ಆಪ್ತರಾಗಿದ್ದಾರೆ. ಈ ಎಲ್ಲ ಕಂಪನಿಗಳು ಆ ಸಚಿವರ ಮಲ್ಲೇಶ್ವರ ಕ್ಷೇತ್ರದಲ್ಲಿ ಸ್ಥಾಪನೆಯಾಗಿವೆ. ಇವು ಮತದಾರರ ಮಾಹಿತಿ ಕಳವು, ಮಾಹಿತಿ ದುರ್ಬಳಕೆ, ನಂಬಿಕೆ ದ್ರೋಹದ ಅಪರಾಧ, ಪಿತೂರಿ ಅಪರಾಧ ಎಸಗಿವೆ ಎಂದು ಆಪಾದಿಸಿದ್ದಾರೆ.

ಕೃಷ್ಣಪ್ಪ ರವಿಕುಮಾರ್ ತಮ್ಮ ಖಾಸಗಿ ಸಂಸ್ಥೆ ಸಿಬ್ಬಂದಿಗೆ ಬಿಎಲ್ಒ ಗುರುತಿನ ಚೀಟಿ ನೀಡಿದ್ದಾರೆ. ಇದು ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಮಾಡಲಾಗಿರುವ ಅಪರಾಧ. ಇದು ಐಪಿಸಿ ಸೆಕ್ಷನ್ ಪ್ರಕಾರ ಶಿಕ್ಷಾರ್ಹ ಅಪರಾಧ. ಇದರಿಂದ ರಾಜ್ಯದ ಜನರಿಗೆ ಯಾವ ಸಂದೇಶ ಹೋಗುತ್ತದೆ. ಇದರ ಹಿಂದಿನ ಉದ್ದೇಶವೇನು? ಇದು ಸ್ಪಷ್ಟ ಮೋಸ, ವಂಚನೆಯಾಗಿದೆ ಎಂದು ಕಿಡಿಕಾರಿದರು.

ನವೆಂಬರ್ 16, 2022ರಂದು ಈ ಸಂಸ್ಥೆಗೆ ನೀಡಲಾಗಿದ್ದ ಅನುಮತಿಯನ್ನು ರದ್ದುಗೊಳಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ ರದ್ದು ಮಾಡಲು ಕಾರಣ ಏನು ಎಂದು ತಿಳಿಸಿಲ್ಲ. ನೀವು ಷರತ್ತು ಉಲ್ಲಂಘನೆ ಮಾಡಿದ್ದು ಹೀಗಾಗಿ ಅನುಮತಿ ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ. ಇದರ ಹಿಂದೆ ಬಸವರಾಜ ಬೊಮ್ಮಾಯಿ ಅವರು ಇದ್ದಾರೆ. ಈ ಅಕ್ರಮಕ್ಕೆ ಬೊಮ್ಮಾಯಿ ಅವರೇ ನೇರ ಹೊಣೆ ಎಂದು ದೂರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular