ಯೋಗೇಶ್ ಮಾಸ್ಟರ್
ವಿದಾಯದ ವಂದನೆಗಳು
ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದ ಹಿರಿಯ ಕಲಾವಿದ, ನಾಟಕಕಾರ, ಕವಿ ಮತ್ತು ಅಂಕಣಕಾರ ಟಿ.ಎಸ್.ಲೋಶಿತಾಶ್ವ ಅವರು ಇಂದು – 08.11.2022 ರಂದು ಮಧ್ಯಾನ್ಹ 2.40ಕ್ಕೆ ಕೊನೆಯುಸಿರು ಎಳೆದಿದ್ದಾರೆ.
ಅವರಿಗೆ ಎಂಭತ್ತು ವರುಷ ವಯಸ್ಸಾಗಿತ್ತು.(1942-2022). ಕಳೆದ ಒಂದು ತಿಂಗಳಿಂದ ವಯೋ ಸಹಜ ದೈಹಿಕ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಲೋಹಿತಾಶ್ವ ಅವರು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರಾಗಿ ವೃತ್ತಿ ಜೀವನವನ್ನು ತುಮಕೂರಿನ ಸರ್ಕಾರಿ ಕಾಲೇಜಿನಿಂದ ಆರಂಭಿಸಿ, ನಂತರ ರಾಜ್ಯದ ಹಾಗೂ ಬೆಂಗಳೂರಿನ ವಿವಿಧ ಸರ್ಕಾರಿ ಕಾಲೇಜಿನಲ್ಲಿ ಸೇವೇ ಸಲ್ಲಿಸಿ, ನಗರದ ಕೆ ಆರ್ ಪುರಂ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದರು.
ಇಬ್ಬರು ಗಂಡು ಮಕ್ಕಳು – ಶರತ್ ಮತ್ತು ರಾಹುಲ್, ಮತ್ತು ಒಬ್ಬಳು ಮಗಳು ವಿನಯಕುಮಾರಿ ಪತ್ನಿ ವತ್ಸಲಾ
ಮತ್ತು ಸೊಸೆ, ಅಳಿಯ, ಮೊಮ್ಮಕ್ಕಳನ್ನೂ ಅಗಲಿದ್ದಾರೆ.
ಕನ್ನಡದ ಅತ್ಯಂತ ಜನಪ್ರಿಯ ನಾಟಕ ‘ಮುಖ್ಯಮಂತ್ರಿ’ ನಾಟಕವನ್ನು ಹಿಂದಿಭಾಷೆ ಯಿಂದ ಕನ್ನಡಕ್ಕೆ ಅನುವಾದಿಸಿದವರು, ಲೋಹಿತಾಶ್ವ. ಅದೇ ರೀತಿ ‘ಕಬೀರ’ ನಾಟಕವನ್ನೂ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದರು. “ಅಕ್ಕಡಿ ಸಾಲು” ಎಂಬ ಅಂಕಣ ಬರಹಗಳ ಮತ್ತು “ಹೊತ್ತು ಹೋಗುವ ಮುನ್ನ” ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.
ಸಮುದಾಯ ಬೆಂಗಳೂರಿನ ‘ಕತ್ತಲೆ ದಾರಿ ದೂರ, ಹುತ್ತವ ಬಡಿದರೆ, ಅದೇ ಅಧೂರೆ’, ಜನಪದ ತಂಡದ ‘ಹುಲಿಯ ಸೀರೆ’, ಮುಂತಾದ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಐನೂರಕ್ಕೂ ಹೆಚ್ಚು ಕನ್ನಡ ಚಲನ ಚಿತ್ರಗಳಲ್ಲಿ ಅಭಿನಯಿಸಿರುವ ಲೋಹಿತಾಶ್ವ, ತಮ್ಮ ಕಂಚಿನ ಕಂಠ ಹಾಗೂ ಕನ್ನಡ ಭಾಷೆಯ ಸ್ಪಷ್ಟ ಉಚ್ಚಾರಣೆಗೆ ಮನೆ ಮಾತಾಗಿದ್ದರು. ತಮ್ಮ ಎತ್ತರದ ನಿಲುವಿನಿಂದಾಗಿ, ಅಭಿನಯಿಸುವ ಪಾತ್ರಗಳಿಗೆ ಗಾಂಭೀರ್ಯವನ್ನು ತರುತ್ತಿದ್ದವರು ಲೋಹಿತಾಶ್ವ.
ಬೆಂಗಳೂರು ಸಮುದಾಯದ ತಾಯಿ ನಾಟಕದಿಂದಾಗಿ ತುಂಬಾ ಪ್ರಭಾವಿತರಾಗಿದ್ದ ಲೋಹಿತಾಶ್ವ, ಈ ನಾಟಕದ ನಂತರ, ತುಮಕೂರಿನಲ್ಲಿ ಸಮುದಾಯ ಘಟಕವನ್ನು ಪ್ರಾರಂಭಿಸಿ, ಸಿಜಿಕೆ ನಿರ್ದೇಶನದ
‘ಪಂಚಮ’ ಮತ್ತು ‘ಯಾರು ಗೆಳೆಯ ನೀನು ಯಾರು’ ನಾಟಕಗಳನ್ನು ಪ್ರಯೋಗಿಸಿದ್ದರು. ತುಮಕೂರಿನಲ್ಲಿ, ಹೊಸ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿ, ‘ಕತ್ತಲೆ ದಾರಿ ದೂರ’ ನಾಟಕವನ್ನು ನಿರ್ದೇಶಿಸಿ, ತುಮಕೂರು, ಉಡುಪಿ, ಮಂಗಳೂರು ಮುಂತಾದ ಕಡೆಗಳಲ್ಲಿ ಪ್ರದರ್ಶನ ನೀಡಿದ್ದರು. ಅರವತ್ತು- ಎಪ್ಪತ್ತು ಪ್ರದರ್ಶನಗಳನ್ನು ಕಂಡ ಈ ತುಮಕೂರಿನ ಪ್ರಯೋಗ, ಟಿ ಎನ್ ನರಸಿಂಹನ್ ನಿರ್ದೇಶನದ ಬೆಂಗಳೂರಿನ ಕತ್ತಲೆ ದಾರಿ ದೂರದಷ್ಟೇ ಯಶಸ್ವಿ ಪ್ರಯೋಗವಾಗಿತ್ತು.
ಸಮುದಾಯ ರಾಜ್ಯ ಸಮಿತಿ ಸಂಯೋಜಿಸುವಲ್ಲಿ, ಸಮುದಾಯ ವಾರ್ತಾಪತ್ರ ಹೊರತರುವಲ್ಲಿ ಲೋಹಿತಾಶ್ವ ಅವರ ಕೊಡುಗೆ ಸಮುದಾಯಕ್ಕೆ ಅಪಾರವಾದದ್ದು.
ಕಾರಂತ, ಪ್ರಸನ್ನ, ನಾಗೇಶ್, ಸಿಜಿಕೆ, ಎಮ್ ಎಸ್ ಸತ್ಯು, ಬಿ. ಜಯಶ್ರೀ, ಸಾಣೇಹಳ್ಳಿ ಸ್ವಾಮೀಜಿಗಳು,ಸುತ್ತೂರು ಸ್ವಾಮೀಜಿಗಳು, ಹೆಚ್.ಎಸ್.ಶಿವಪ್ರಕಾಶ್, ಡಿ.ಆರ್. ನಾಗರಾಜ್, ಶೂದ್ರ ಶ್ರೀನಿವಾಸ್, ಜರಗನಹಳ್ಳಿ ಶಿವಶಂಕರ್, ಸಿದ್ದಲಿಂಗಯ್ಯ, ಎಸ್ ಜಿ ಸಿದ್ದರಾಮಯ್ಯ, ಬರಗೂರು ರಾಮಚಂದ್ರಪ್ಪ, ಟಿ ಎನ್ ನರಸಿಂಹನ್, ಟಿ.ಎನ್.ಸೀತಾರಾಂ, ಡಾ.ಜಿ.ಆರ್, ಟಿವಿಎಮ್, ಎಮ್ ಸಿ ಆನಂದ್, ಎಮ್.ಜಿ.ವೆಂಕಟೇಶ್, ಸಿ ಆರ್ ಸಿಂಹ, ಕಪ್ಪಣ್ಣ, ದೇವರಾಜ್, ಸತ್ಯಸಂಧ, ಮಾಲತಿ, ಅವಿನಾಶ್,ಎ ಎಸ್ ಮೂರ್ತಿ, ಲಿಂಗದೇವರು ಹಳೇಮನೆ, ಜನ್ನಿ, ಬಸು, ವಾಲ್ಟರ್ ಡಿಸೌಜ, ಮುಖ್ಯಮಂತ್ರಿ ಚಂದ್ರು, ಬಿ.ವಿ.ರಾಜಾರಾಂ, ಶ್ರೀನಿವಾಸ ಮೇಷ್ಟ್ರು, ಯತಿರಾಜ್, ಆರಾಧ್ಯ, ಸಣ್ಣಗುಡ್ಡಯ್ಯ, ಚಿಕ್ಕವೀರಯ್ಯ, ಟಿ.ಎಸ್.ಅನಂತರಾಮು, ಎಸ್.ಆರ್.ಆರಾಧ್ಯ, ಡಾ.ಕೆ ಎಮ್ ಎಸ್.,ಮೋಹನ್ ಕುಮಾರ್, ಲಲಿತ ಚಿಂದಗುಡಿ,ಸನತ್ ಕುಮಾರ್,
ಉಮಾಶ್ರೀ, ಮುಂತಾದ ಇನ್ನೂ ಅಸಂಖ್ಯಾತ ಕಲಾವಿದರು ಮತ್ತು ನಿರ್ದೇಶಕರೊಟ್ಟಿಗೆ ಆತ್ಮೀಯ ಸಂಪರ್ಕ ಇಟ್ಟುಕೊಂಡಿದ್ದ ಲೋಹಿ, ಪ್ರಗತಿಪರ ಚಿಂತನೆಗಳನ್ನು ಮತ್ತು ಮೂಢ ನಂಬಿಕೆಗಳ ವಿರುದ್ದದ ಚಿಂತನೆಗಳನ್ನು ಸದಾಕಾಲವೂ ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಸ್ನೇಹಿತರಿಗೆ ಭೋದಿಸಿದವರು ಲೋಹಿತಾಶ್ವ.
ಕೊನೆಯ ಕಾಲದವರೆವಿಗೂ ತಮ್ಮ ಪ್ರಗತಿಪರ ಚಿಂತನೆಗಳಲ್ಲಿ ರಾಜಿ ಮಾಡಿಕೊಳ್ಳದ ಲೋಹಿ, ತಮಗಿಷ್ಟವಾದ , ತಮಗೆ ಸರಿ ಎನಿಸಿದ ರೀತಿಯಲ್ಲಿ ಅತ್ಯಂತ ಸರಳ ಬದುಕನ್ನು ಒಪ್ಪಿಕೊಂಡು ಬಾಳಿದವರು. ಬದುಕಿನ ಕೊನೆಯ ಒಂದು ತಿಂಗಳು ಸ್ವಲ್ಪ ಅನಾರೋಗ್ಯದಿಂದ ನರಳಿದ್ದನ್ನು ಬಿಟ್ಟರೆ, ಅತ್ಯಂತ ಆರೋಗ್ಯಕರ, ಪ್ರಖರ ಮಿದುಳು ಮತ್ತು ಮನಸ್ಸನ್ನು ಹೊಂದಿದ್ದ ಲೋಹಿ, ಇನ್ನಷ್ಟು ಕಾಲ ನಮ್ಮೊಟ್ಟಿಗೆ ಇರಬೇಕಿತ್ತು……
ಲೋಹಿತಾಶ್ವ ಅವರ ಪಾರ್ಥಿವ ಶರೀರವನ್ನು ಇಂದು ರಾತ್ರಿ 8.30 ರಿಂದ ನಾಳೆ ಬೆಳಿಗ್ಗೆ 11.30 ರ ವರೆವಿಗೂ ಅವರ ಕುಮಾರಸ್ವಾಮಿ ಲೇ ಔಟ್ ನ ಮನೆಯ ಎದುರು, ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿರುತ್ತದೆ. ನಂತರ ಅವರ ಹುಟ್ಟೂರು, ತೊಂಡಗೆರೆಗೆ ಒಯ್ಯಲಾಗುವುದು.
ಸಮುದಾಯ ಕರ್ನಾಟಕ ರಾಜ್ಯ ಸಮಿತಿಯು ಹಿರಿಯ ಕಲಾವಿದ ಟಿ.ಎಸ್.ಲೋಹಿತಾಶ್ವ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತದೆ ಮತ್ತು ಅವರಿಗೆ ಭಾವಪೂರ್ಣ ಅಂತಿಮ ನಮನ ಸಲ್ಲಿಸುತ್ತದೆ.
ಲೇಖಕರು, ಕವಿಗಳು, ಹಿರಿಯ ಬರಹಗಾರರು