ಹಿಂದೂ ಪದದ ಕುರಿತು ನಾನು ಆಡಿರುವ ಮಾತಿಗೆ ಬದ್ದವಾಗಿದ್ದು ಈ ಬಗ್ಗೆ ಚರ್ಚೆಗೆ ಸಿದ್ದವಿದ್ದೇನೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.
ನಾನು ಯಾವುದೇ ಧರ್ಮ ಮತ್ತು ಭಾಷೆಗೆ ಅವಮಾನ ಮಾಡಿಲ್ಲ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಹಿಂದೂ ಪದವು ಪರ್ಷಿಯನ್ ಮೂಲವನ್ನು ಹೊಂದಿದೆ ಎಂದು ನಾನು ಉಲ್ಲೇಖಿಸಿದ್ದು ನಿಜ. ನಾನು ಅದರ ಬಗ್ಗೆ ಸಂಪೂರ್ಣ ಚರ್ಚೆಗೆ ಒತ್ತಾಯಿಸಿದ್ದೇನೆ ಎಂದಿದ್ದಾರೆ.
ಈ ಪರ್ಷಿಯನ್ ಪದ (ಹಿಂದೂ) ಹೇಗೆ ಬಂದಿತು ಎಂಬುದಕ್ಕೆ ನೂರಾರು ದಾಖಲೆಗಳಿವೆ. ಸ್ವಾಮಿ ದಯಾನಂದ ಸರಸ್ವತಿ ಅವರ ಸತ್ಯಾರ್ಥ ಪ್ರಕಾಶ, ಡಾ.ಜಿ.ಎಸ್.ಪಾಟೀಲ್ ಅವರ ಬಸವ ಭಾರತ, ಬಾಲಗಂಗಾಧರ ತಿಲಕರ ಕೇಸರಿ ಪತ್ರಿಕೆಗಳಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ಇವು ಕೇವಲ 3-4 ಉದಾಹರಣೆಗಳಾಗಿವೆ. ವಿಕಿಪೀಡಿಯಾ ಅಥವ ಯಾವುದೇ ವೆಬ್ ಸೈಟ್ ನಲ್ಲಿ ಇಂತಹ ಹಲವು ಲೇಖನಗಳು ಲಭ್ಯವಿವೆ. ನೀವು ಅದನ್ನು ಓದಬೇಕು ಎಂದು ವಿಡಿಯೋ ಹೇಳಿಕೆಯಲ್ಲಿ ಹೇಳಿದ್ದಾರೆ.
ತಪ್ಪು ಸಾಬೀತಾದರೆ ಶಾಸಕ ಸ್ಥಾನದಿಂದ ಕೆಳಗಿಳಿಯುವುದಾಗಿಯೂ ಹೇಳಿದ್ದಾರೆ. ನಾನು ತಪ್ಪು ಎಂದು ಎಲ್ಲರೂ ಸಾಬೀತುಪಡಿಸಲಿ, ತಪ್ಪಾಗಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ನನ್ನ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.
ಸತೀಶ್ ಜಾರಕಿಹೊಳಿಯವರು ಭಾನುವಾರ ಹಿಂದೂ ಎಂಬ ಪದವು ಪರ್ಷಿಯನ್ ಪದವಾಗಿದ್ದು, ಭಯಾನಕ ಎಂಬ ಅರ್ಥವನ್ನು ನೀಡುತ್ತದೆ ಮತ್ತು ಜನರು ಅದನ್ನು ಏಕೆ ಉನ್ನತ ಸ್ಥಾನದಲ್ಲಿ ಇಡುತ್ತಾರೆ ಎಂದು ಹೇಳಿದ್ದರು.