ಕೋಲಾರದ ಜೆಡಿಎಸ್ ಮುಖಂಡ ಸುಹೆಲ್ ದಿಲ್ ನವಾಜ್ ಅವರು ಪಕ್ಷವನ್ನು ತೊರೆದು ಆಮ್ ಆದ್ಮಿ ಪಕ್ಷ ಸೇರ್ಪಡೆಯಾದರು. ಎಎಪಿ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆಯವರು ಸುಹೆಲ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ದಿಲೀಪ್ ಪಾಂಡೆ, ಸುಹೆಲ್ ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ಕೋಲಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಬ್ದುಲ್ ಲತೀಪ್ ರವರು. ಕರ್ನಾಟಕದ ರೇಷ್ಮೆ ಉದ್ಯಮದ ಪಿತಾಮಹ ಎಂದು ಪ್ರಸಿದ್ದರಾಗಿದ್ದರು ಎಂದು ಸ್ಮರಿಸಿದರು.
ಸುಹೆಲ್ ಅವರು ಇಂಗ್ಲೇಂಡ್ ನಲ್ಲಿ ಎಂ.ಎ, ಎಲ್ಎಲ್.ಬಿ, ಐಎಲ್.ಟಿ ಶಿಕ್ಷಣ ಪಡೆದಿದ್ದಾರೆ ಕಿರಿಯ ವಯಸ್ಸಿನಿಂದಲೂ ರಾಜಕೀಯ ಹೋರಾಠಗಳಲ್ಲಿ ಆಸಕ್ತಿ ಹೊಂದಿದ್ದಾರೆ. ವಿದ್ಯಾರ್ಥಿ ನಾಯಕರಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ ಅನುಭವ ಹೊಂದಿದ್ದಾರೆ ಎಂದು ಪರಿಚಯಿಸಿದರು.
ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಹೆಲ್ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ವೆಚ್ಚ ಕಡಿತ ಹಾಗೂ ಇನ್ನಿತರ ಬದಲಾವಣೆಗಳನ್ನು ತಂದಿದ್ದರು. ಕೋಲಾರದ ರೈಲ್ವೆ ಸಂಪರ್ಕ ಅಭಿವೃದ್ಧಿಯಲ್ಲಿ ಸುಹೆಲ್ ಪಾತ್ರ ಮಹತ್ವದ್ದಾಗಿದೆ. ಇಂತಹ ಜನಪರ ಕಾಳಜಿಯುಳ್ಳ ನಾಯಕರು ಜೆಡಿಎಸ್ ತೊರೆದು ಆಮ್ ಆದ್ಮಿ ಪಾರ್ಟಿ ಸೇರುತ್ತಿರುವುದು ಸಂತಸದ ವಿಚಾರ ಎಂದರು.
ಸುಹೆಲ್ ಮಾತನಾಡಿ, ಜನಾನುರಾಗಿ ಆಡಳಿತ ಹೇಗಿರುತ್ತದೆ ಎಂಬುದನ್ನು ಆಮ್ ಆದ್ಮಿ ಪಾರ್ಟಿಯು ತೋರಿಸಿಕೊಡುತ್ತಿದೆ. ಆರೋಗ್ಯ, ಶಿಕ್ಷಣ, ಸಾರಿಗೆ ಮುಂತಾದ ಕ್ಷೇತ್ರದಲ್ಲಿ ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ಎಎಪಿ ಸರ್ಕಾರಗಳು ಮಾಡಿರುವ ಸಾಧನೆ ಪ್ರಶಂಸನೀಯ ಎಂದು ಹೇಳಿದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೆ ಮೂಲಭೂತ ಸೌಲಭ್ಯಗಳನ್ನು ಉಚಿತವಾಗಿ ನೀಡಲು ಸಾಧ್ಯವಿದೆ ಎಂಬುದನ್ನು ಪಕ್ಷವು ಸಾಧಿಸಿ ತೋರಿಸಿದೆ. ಕರ್ನಾಟಕದ 40 ಪರ್ಸೆಂಟ್ ಸರ್ಕಾರವನ್ನು ಕಿತ್ತೊಗೆದು ಪಾರದರ್ಶಕ ಆಡಳಿತ ನೀಡುವ ಆಮ್ ಆದ್ಮಿ ಪಾರ್ಟಿಯನ್ನು ಅಧಿಕಾರಕ್ಕೆ ತರಲು ಜನರು ಪಣ ತೊಡಬೇಕು ಎಂದು ಮನವಿ ಮಾಡಿದರು.