2012ರ ಚಾವ್ಲಾ ಸಾಮೂಹಿಕ ಅತ್ಯಾಚಾರ ಮತ್ತು 19 ವರ್ಷದ ಮಹಿಳೆಯ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಮೂವರನ್ನು ಸುಪ್ರೀಂಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ.
ಮೂವರು ಆರೋಪಿಗಳು ಫೆಬ್ರವರಿ 2012ರಲ್ಲಿ ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಂದಿದ್ದರು ಎಂದು ಆರೋಪಿಸಲಾಗಿದೆ.
ಅಪಹರಣಕ್ಕೊಳಗಾದ ಮೂರು ದಿನಗಳ ನಂತರ ಮಹಿಳೆಯ ವಿರೂಪಗೊಂಡ ಶವ ಪತ್ತೆಯಾಗಿತ್ತು. ಮಹಿಳೆಯನ್ನು ಅಪಹರಣ, ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪದಲ್ಲಿ ದೆಹಲಿ ನ್ಯಾಯಾಲಯವು ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ ರಾಹುಲ್, ರವಿ ಮತ್ತು ವಿನೋದ್ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು. ಸೋಮವಾರ ಸುಪ್ರೀಂಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸುವಂತೆ ಆದೇಶಿಸಿದೆ.
ಸುಪ್ರೀಂಕೋರ್ಟ್ ಆದೇಶದ ನಂತರ ಸಂತ್ರಸ್ತೆಯ ತಾಯಿ ಕಣ್ಣೀರು ಸುರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. 11 ವರ್ಷಗಳ ನಂತರ ಇದು ತೀರ್ಪು, ನಾವು ಸೋತಿದ್ದೇವೆ. ಈ ತೀರ್ಪಿಗಾಗಿ ಕಾಯುತ್ತಿದದ್ದೆ. ಈಗ ನಾನು ಬದುಕಲು ಯಾವುದೇ ಕಾರಣವಿಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಮಗಳಿಗೆ ನ್ಯಾಯ ಸಿಗುತ್ತದೆ ಎಂದು ಭಾವಿಸಿದ್ದೆ ಎಂದು ಹೇಳಿದರು.
ಮಹಿಳೆ ಗುರುಗಾಂವ್ ಸೈಬರ್ ಸಿಟಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದು ಉತ್ತರಾಖಂಡ್ ಮೂಲದವರು. ಫೆಬ್ರವರಿ 2012ರಂದು ಅವಳು ತನ್ನ ಕೆಲಸದ ಸ್ಥಳದಿಂದ ಮನೆಗೆ ಹಿಂದಿರುಗುತ್ತಿದ್ದಳು ಮತ್ತು ಆಕೆಯ ಮನೆಯ ಬಳಿ ಇದ್ದಾಗ ಆರೋಪಿಗಳು ಅವಳನ್ನು ಕಾರಿನಲ್ಲಿ ಅಪಹರಿಸಿದ್ದರು. ಆಕೆ ಮನೆಗೆ ಬಾರದೆ ಇದ್ದಾಗ ಆಕೆಯ ಪೋಷಕರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಮಹಿಳೆಯ ವಿರೂಪಗೊಂಡ ಮತ್ತು ಕೊಳೆತ ದೇಹವು ನಂತರ ಹರಿಯಾಣದ ರೇವಾರಿ ಗ್ರಾಮದಲ್ಲಿ ಪತ್ತೆಯಾಗಿತ್ತು.
ಪೊಲೀಸರು ಮಹಿಳೆಯ ದೇಹದ ಮೇಲೆ ಅನೇಕ ಗಾಯಗಳನ್ನು ಕಂಡಿದ್ದರು ಮತ್ತು ಹೆಚ್ಚಿನ ತನಿಖೆ ಮತ್ತು ಶವಪರೀಕ್ಷೆಯಲ್ಲಿ ಅವರು ಕಾರಿನ ಉಪಕರಣಗಳು, ಗಾಜಿನ ಬಾಟಲಿಗಳು, ಲೋಹದ ವಸ್ತುಗಳು ಮತ್ತು ಇತರ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆಕೆಯ ಮೇಲೆ ಅತ್ಯಾಚಾರವು ನಡೆದಿದೆ ಎಂದು ಹೇಳಲಾಗಿದೆ.