Saturday, July 27, 2024
Google search engine
Homeಜಿಲ್ಲೆಕುಲಾಂತರಿ ಕಳೆನಾಶಕ-ಸಹಿಷ್ಣು ಸಾಸಿವೆಯಿಂದ ಭಾರತದ ಕೃಷಿಗೆ ಮರಣಶಾಸನ

ಕುಲಾಂತರಿ ಕಳೆನಾಶಕ-ಸಹಿಷ್ಣು ಸಾಸಿವೆಯಿಂದ ಭಾರತದ ಕೃಷಿಗೆ ಮರಣಶಾಸನ

ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಯಲ್ಲಿ ಸಾಸಿವೆಗೆ ಬಹುಮುಖ್ಯ ಪಾತ್ರವಿದೆ. ಅಷ್ಟೇ ಅಲ್ಲ ಸಾಸಿವೆಯಲ್ಲಿ ಭರಪೂರ ಆರೋಗ್ಯಕರ ಅಂಶಗಳೂ ಅಡಕವಾಗಿವೆ. ರಕ್ತದಲ್ಲಿ ಕೊಲೆಸ್ಟರಾಲ್ ಅಂಶವನ್ನು ತಗ್ಗಿಸುವಲ್ಲಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿ ಸಾಸಿವೆ ಕೆಲಸ ಮಾಡುತ್ತದೆ. ಇದರ ಹೊರತಾಗಿಯೂ ಅದರಲ್ಲಿರುವ ಔಷಧೀಯ ಮೌಲ್ಯಗಳು ಅನೇಕ. ಅದು ದೇಹದ ಚರ್ಮವನ್ನು ತಿಳಿಗೊಳಿಸುವಲ್ಲಿ, ಕೂದಲಿನ ಆರೋಗ್ಯ ಕಾಪಾಡುವಲ್ಲಿ ಮತ್ತು ಮಧುಮೇಹವನ್ನು ನಿಗ್ರಹಿಸುವಲ್ಲಿಯೂ ಕೆಲಸ ಮಾಡುತ್ತದೆ.

ಭಾರತ ದೇಶವು ದೊಡ್ಡ ಪ್ರಮಾಣದಲ್ಲಿ ಮಳೆಯಾಶ್ರಿತ ಕೃಷಿಭೂಮಿಯನ್ನು ಹೊಂದಿರುವ ದೇಶವಾಗಿದ್ದು, ಇಲ್ಲಿನ ಒಟ್ಟಾರೆ ಕೃಷಿಭೂಮಿಯ ಪೈಕಿ 70ರಷ್ಟು ಮಳೆಯಾಶ್ರಿತ ವರ್ಗಕ್ಕೆ ಸೇರಿದ್ದಾಗಿದೆ. ಸಾಸಿವೆ ಗಿಡದ ಕಡುಹಳದಿ ಬಣ್ಣದ ಹೂವುಗಳು ಕೀಟಗಳನ್ನು ಆಕರ್ಷಿಸುವ ಕೆಲಸವನ್ನು ಮಾಡುತ್ತವೆಯಲ್ಲದೇ, ಮಿಕ್ಕುಳಿದ ಮುಖ್ಯಬೆಳೆಗಳಿಗೆ ಕೀಟಗಳಿಂದಾಗುವ ಹಾನಿಯನ್ನು ತಪ್ಪಿಸುವಲ್ಲಿಯೂ ಸಕ್ಷಮವಾಗಿ ಕೆಲಸ ಮಾಡುತ್ತದೆ. ಸಾಸಿವೆಯ ಹೂವಿನ ಕಾರಣದಿಂದಾಗಿ ಜೇನ್ನೊಣಗಳು ಅದರತ್ತ ಆಕರ್ಷಿತವಾಗಿ ಪರಾಗಸ್ಪರ್ಶ ಪ್ರಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಇದರ ಫಲಸ್ವರೂಪವಾಗಿ ಇತರೆ ಮುಖ್ಯ ಕೃಷಿಬೆಳೆಗಳ ಇಳುವರಿ 12 ರಷ್ಟು ಹೆಚ್ಚಾಗುತ್ತದೆ ಎಂದೂ ಅಂದಾಜಿಸಲಾಗಿದೆ.

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಅತಿವೃಷ್ಠಿ ಮತ್ತು ಅನಾವೃಷ್ಠಿ ಇದ್ದಾಗ್ಯೂ ಸಾಸಿವೆಬೆಳೆ ಬಹಳ ಚೆನ್ನಾಗಿ ಬರುತ್ತದೆ. ಹವಾಮಾನ ಆಧಾರಿತ ಕೃಷಿಗೆ ಸಾಸಿವೆ ಹೇಳಿಮಾಡಿಸಿದ್ದು, ಇದರಿಂದ ದೇಶದ ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರಿಗೆ ಬಹಳ ಅನುಕೂಲವಾಗುತ್ತಿದೆ.

ಆದರೆ ದುರದೃಷ್ಟದ ಸಂಗತಿಯೆಂದರೆ ಭಾರತ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜೆನೆಟಿಕ್ ಇಂಜಿನಿಯರಿಂಗ್ ಅಪ್ರೆöಸಲ್ ಕಮಿಟಿಯಲ್ಲಿ 18-10-2022 ರಂದು ಕುಲಾಂತರಿ ಸಾಸಿವೆ ತಳಿಗೆ ಅಂಕಿತವನ್ನು ಕೊಟ್ಟಿದೆ. ಹೀಗೆ ಅಂಕಿತ ನೀಡುವ ಮುನ್ನ ಯಾವುದೇ ಶಾಸನಬದ್ಧ ಪ್ರಯೋಗಗಳನ್ನು ಮಾಡಲಾಗಿಲ್ಲ ಮತ್ತು ಇದು ಜೀವವೈವಿಧ್ಯತಾ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಕುಲಾಂತರಿ ಸಾಸಿವೆಯಲ್ಲಿ ದೇಸೀ ತಂತ್ರಜ್ಞಾನವನ್ನು ಬಳಸಲಾಗಿದೆ ಎಂಬ ಅಸತ್ಯ ಸಂಗತಿಯನ್ನು ಹರಿಯಬಿಡಲಾಗಿದೆ. ಸಾರ್ವಜನಿಕರ ಗಮನಕ್ಕೆ ಈ ಮೂಲಕ ತರಬಯಸುವುದೇನೆಂದರೆ ಸದ್ರಿ ಉತ್ಪಾದನೆಯು ಬೇಯರ್ ಕಂಪನಿಯ ಪೇಟೆಂಟ್ ಅಡಿಯಲ್ಲಿದೆ. ಈ ಕುಲಾಂತರಿ ತಳಿಯಲ್ಲಿ ಬರ್ನೇಸ್ ಮತ್ತು ಬಸ್ತಾರ್ ಎಂಬ ಎರಡು ವಂಶವಾಹಿಗಳನ್ನು ಮಣ್ಣಿನಲ್ಲಿ ಅಡಕವಿರುವ ಬ್ಯಾಕ್ಟಿರಿಯಾ ಆದ ಬಾಸಿಲಸ್ ಅಮೈಲೋಲಿಕ್ವಿಫೇಸಿಯನ್ಸ್ ಎಂಬುದರಿಂದ ಪಡೆದುಕೊಳ್ಳಲಾಗಿದೆ.

ಇವೆರಡೂ ವಂಶವಾಹಿಗಳು ಬಾಯರ್ ಆಗ್ರೋ ಸೈನ್ಸ್ ನವರ ಪೇಟೆಂಟ್ ಆಗಿದ್ದು ಅವುಗಳನ್ನು ದೇಸೀ ತಂತ್ರಜ್ಞಾನ ಎಂಬ ಸುಳ್ಳು ಪ್ರಚಾರದೊಂದಿಗೆ ಮುನ್ನೆಲೆಗೆ ತರಲಾಗುತ್ತಿದೆ. ಈಗ ನಮ್ಮ ಮುಂದಿರುವ ಪ್ರಶ್ನೆಗಳೆಂದರೆ ಬೇಯರ್ ಕಂಪನಿ ಯಾರ ಮಾಲೀಕತ್ವದಲ್ಲಿದೆ? ಅದು ಯಾವ ಮೂಲತಃ ಯಾವ ದೇಶದ್ದು? ಅದರ ತಾಂತ್ರಿಕತೆಯಿಂದ ಯಾರಿಗೆ ಲಾಭವಾಗುತ್ತಿದೆ?

GM-Ht Mustard ಕುಲಾಂತರಿ ಸಾಸಿವೆ ತಳಿಯು ನಮ್ಮ ಆಯ್ದ ದೇಸೀ ತಳಿಗಳಿಗಿಂತ 23ರಷ್ಟು ಹೆಚ್ಚಿನ ಇಳುವರಿ ಕೊಡುತ್ತವೆ ಎಂದು ಹೇಳಲಾಗುತ್ತಿದೆ. ಇದು ಕೂಡ ಅಸತ್ಯ ಮಾಹಿತಿ. ಅಂತಹ ಯಾವುದೇ ಸಂಗತಿಗಳು ನಮ್ಮ ಕೃಷಿಕರ ಮಟ್ಟದಲ್ಲಿ ಪ್ರಮಾಣೀಕೃತವಾಗಿಲ್ಲ ಮತ್ತು ಅದಕ್ಕೆ ಪೂರಕವಾದ ವೈಜ್ಞಾನಿಕ ದತ್ತಾಂಶಗಳೂ ಕೂಡ ಲಭ್ಯವಿಲ್ಲ. ಇದು ಕೇವಲ ಸಮರ್ಥನೆಗಾಗಿ ಮಾಡಿರುವ ಹುಸಿ ಹೇಳಿಕೆಗಳು.

GM-Ht ಎಂದರೇನು? ಅದರ ಪೂರ್ಣಪಾಠ “ಜೆನೆಟಿಕಲ್ಲಿ ಮಾಡಿಫೈಡ್ ಹರ್ಬಿಸೈಡ್ ಟಾಲರೆನ್ಸ್” ಎಂಬುದಾಗಿದೆ. ಅಂತರ್ಗತವಾಗಿ ಇದರ ಅರ್ಥವೇನೆಂದರೆ, ಈ ಕುಲಾಂತರಿ ಬೀಜಗಳು ಕಳೆನಾಶಕ-ಸಹಿಷ್ಣುವಾಗಿದ್ದು, ಮಳೆಯಾಶ್ರಿತ ಕೃಷಿಭೂಮಿಯಲ್ಲಿ ಸಸ್ಯನಾಶಕಗಳನ್ನು ಬಳಸಬಹುದಾಗಿದೆ.

ದುರಾದೃಷ್ಟವಶಾತ್ ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಿರುವ ಸಂಗತಿಯೆಂದರೆ ಈ ಕಳೆನಾಶಕಗಳು ಕ್ಯಾನ್ಸರ್ ಕಾರಕ ಅಂಶಗಳನ್ನು ಹೊಂದಿದ್ದು, ಮಾನವನ ಮತ್ತು ಪ್ರಾಣಿಗಳ ದೇಹದ ಕೋಶಕ್ಕೆ ಅಪಾಯಕಾರಿಯಾಗಿವೆ., ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅದರ ಬಳಕೆಯನ್ನು ನಿಷೇಧಿಸಲಾಗಿದೆ.

ಯು.ಎಸ್.ಎ. ಸೇರಿದಂತೆ ಅನೇಕ ರಾಷ್ಟçಗಳ ನ್ಯಾಯಾಂಗ ವ್ಯವಸ್ಥೆ ಈ ಬಗ್ಗೆ ಕೋಟ್ಯಂತರ ರೂಪಾಯಿಗಳ ಜುಲ್ಮಾನೆಯನ್ನು ಕೂಡ ವಿಧಿಸಿದೆ. ಆದರೆ ಇದೀಗ ಕಳೆನಾಶಕ-ಸಹಿಷ್ಣು ಬೆಳೆಗಳು ಎಂಬ ಸೂತ್ರದಡಿಯಲ್ಲಿ ಸದ್ರಿ ಕಳೆನಾಶಕಗಳು ಮತ್ತೆ ಭಾರತದ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಜ್ಜಾಗಿ ಕುಳಿತಿವೆ.

ಈ ತಂತ್ರಜ್ಞಾನದಿಂದ ಮಾನವನ ಆರೋಗ್ಯಕ್ಕೆ ಮಾರಕವಾಗುವ ಎಲ್ಲ ಅಪಾಯಗಳಿರುವುದು ಮಾತ್ರವಲ್ಲ ಪರಿಸರ ಮತ್ತು ಒಟ್ಟಾರೆ ಜೈವಿಕ ವ್ಯವಸ್ಥೆಯ ಆರೋಗ್ಯಕ್ಕೂ ಇದು ಹಾನಿಕಾರಕವಾಗಿದೆ. ಒಮ್ಮೆ ಇಂತಹ ಕುಲಾಂತರಿ ತಳಿಗಳನ್ನು ಪರಿಸರಕ್ಕೆ ವ್ಯಾಪಿಸಿದರೆ ಅದರಿಂದಾಗುವ ಹಾನಿಯನ್ನು ಮತ್ತೆ ಸರಿಪಡಿಸಲಾಗದು, ಅವುಗಳನ್ನು ಹಿಂಪಡೆಯುವುದೂ ಅಸಾಧ್ಯ. ಇತರೆ ತಳಿಗಳಲ್ಲೂ ಇದರ ವಿಷಕಾರಿ ಅಂಶಗಳು ಸೇರ್ಪಡೆಯಾಗುತ್ತವೆ ಮತ್ತು ಅದರಿಂದಲೂ ಹಲವು ರೋಗಕಾರಕಗಳ ಬಿಡುಗಡೆಯಾಗಿ ಅವುಗಳ ಪ್ರಮಾಣವನ್ನು ಲೆಕ್ಕಹಾಕುವುದಾಗಲೀ, ಅಥವಾ ಸರಿಪಡಿಸುವುದಾಗಲೀ ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ಈ ವಿನಾಶಕಾರಿ ವಿಜ್ಞಾನ ಪೇಟೆಂಟ್ ಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕು ಕಾಯಿದೆಯ ಭಾಗವಾಗಿದ್ದು, ಬೇಯರ್ ನಂತಹ ಕಾರ್ಪೊರೇಟ್ ಕಂಪನಿಗಳು, ಈ ಭೂಮಿಯ ಮೇಲೆ ತಮ್ಮ ಪಾರಮ್ಯವನ್ನು ಸಾಧಿಸಲು, ಆಹಾರ ವ್ಯವಸ್ಥೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಇಂತಹ ಕುಲಾಂತರಿ ತಳಿ ಬೀಜಗಳ ಮೂಲಕ ಕೃಷಿಕವಿರೋಧಿ ನಡವಳಿಕೆಗೆ ಮುಂದಾಗಿವೆ ಮತ್ತು ಇದು ಸಂವಿಧಾನ ವಿರೋಧಿ, ಸಮಾಜವಿರೋಧಿ, ಸಂಸ್ಕೃತಿ ವಿರೋಧಿ ಮತ್ತು ಪರಿಸರ ವಿರೋಧಿ ಕೃತ್ಯವಾಗಿರುತ್ತದೆ. ಇದು ಜೈವಿಕ ವ್ಯವಸ್ಥೆಯ ಉಲ್ಲಂಘನೆ ಮಾತ್ರವಲ್ಲ ಇದರಿಂದ ಮಾನವ ಹಕ್ಕುಗಳ, ಪರಿಸರದ ಹಕ್ಕುಗಳ, ಪಂಚಾಯತ್ ಹಕ್ಕುಗಳ ಮತ್ತು ನಮ್ಮ ರೈತರ ಸಾರ್ವಭೌಮತ್ವದ ಹಕ್ಕುಗಳ ಉಲ್ಲಂಘನೆಯೂ ಆಗುತ್ತಿದೆ.

ಹಾಗಾಗಿ ಬೇಯರ್ ನಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ಕುಲಾಂತರಿ ತಳಿಬೀಜಗಳು ಮತ್ತು ಆಹಾರೋತ್ಪಾದನೆಗಳ ಮೂಲಕ ಭಾರತದಲ್ಲಿ ವಸಾಹತು ಸ್ಥಾಪನೆ ಮಾಡಲು ಅವಕಾಶ ಮಾಡಿಕೊಡುತ್ತಿರುವ ಭಾರತ ಸರಕಾರದ ನಿರ್ಧಾರವನ್ನು ಗಾಂಧೀ ಸಹಜ ಬೇಸಾಯ ಶಾಲೆ ಖಂಡಿಸುತ್ತದೆ.

ಗಾಂಧೀ ಸಹಜ ಬೇಸಾಯ ಶಾಲೆ ಈ ಬಗ್ಗೆ ಕೇಂದ್ರ ಪರಿಸರ ಸಚಿವರಿಗೆ ಪತ್ರ ಬರೆಯಲಾಗಿದೆ. ಇದಲ್ಲದೆ ಸಮಾನ ಮನಸ್ಕ ರೈತ ಸಂಘಟನೆಗಳು ಹಾಗು ಸಂಘ ಸಂಸ್ಥೆಗಳೊಂದಿಗೆ ಸಮಲೋಚಿಸಿ ಈ ಬಗ್ಗೆ ಐಕ್ಯಾ ಚಳುವಳಿಯನ್ನು ರೂಪಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತದೆ.

ಸಹ-ಸಂಚಾಲಕರು
ಡಾ. ಮಂಜುನಾಥ್
ಸಿ.ಯತಿರಾಜು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular