ಜಿಲ್ಲಾ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಮತ್ತು ಎರಡು ನವಜಾತ ಶಿಶುಗಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.
ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಕಸ್ತೂರಿ ಎಂಬ ಗರ್ಭಿಣಿ ಜಿಲ್ಲಾಸ್ಪತ್ರೆಗೆ ಆಟೋದಲ್ಲಿ ಬಂದಿದ್ದಾರೆ. ಹೆರಿಗೆ ಮಾಡಿಸಲು ವೈದ್ಯರು ಆಧಾರ್ ಕಾರ್ಡು ಮತ್ತು ರೇಷನ್ ಕಾರ್ಡು ಇಲ್ಲದೆ ಮಾಡಿಸುವುದಿಲ್ಲ ಎಂದು ಕಟುವಾಗಿ ಹೇಳಿ ಗರ್ಭಿಣಿಯನ್ನು ವಾಪಸ್ ಕಳಿಸಿದ್ದಾರೆ ಎಂದು ದೂರಲಾಗಿದೆ.
ಭಾರತೀನಗರಕ್ಕೆ ಹೋದ ಗರ್ಭಿಣಿ ಕಸ್ತೂರಿಗೆ ಮೊದಲು ಒಂದು ಮಗುವಿಗೆ ಜನ್ಮ ನೀಡಿ, ನಂತರ ಎರಡನೇ ಮಗುವಿಗೂ ಜನ್ಮ ನೀಡಿದರೆಂದು ತಿಳಿದು ಬಂದಿದೆ.
ಹೆರಿಗೆ ಆದ ಸಂದರ್ಭದಲ್ಲಿ ರಕ್ತಸ್ರಾವ ಹೆಚ್ಚಾಗಿ ಕಸ್ತೂರಿ ಮೃತಪಟ್ಟಿದ್ದಾರೆ. ಶಿಶುಗಳನ್ನು ಆರೈಕೆ ಮಾಡದೇ ಇದ್ದುದ್ದರಿಂದ ಎರಡು ಶಿಶುಗಳೂ ಸಾವನ್ನಪ್ಪಿವೆ ಎಂದು ಹೇಳಲಾಗಿದೆ.
ಇದಕ್ಕೂ ಮೊದಲು ಕಸ್ತೂರಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ಥಳೀಯರು ಸೇರಿ ಆಟೋ ಮಾಡಿ ಒಬ್ಬರನ್ನು ಜೊತೆ ಮಾಡಿ ಜಿಲ್ಲಾಸ್ಪತ್ರೆಗೆ ಕಳಿಸಿಕೊಟ್ಟರು. ಆದರೆ ವೈದ್ಯರು ಆಧಾರ್ ಕಾರ್ಡು ಮತ್ತು ರೇಷನ್ ಕಾರ್ಡು ಇಲ್ಲದೆ ಹೆರಿಗೆ ಮಾಡಿಸುವುದಿಲ್ಲ ಎಂದು ಹೇಳಿದ್ದರಿಂದ ತಾಯಿ ಮತ್ತು ಎರಡು ನವಜಾತ ಶಿಶುಗಳು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.