ಗುಜರಾತ್ ನ ಮೊರ್ಬಿಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದ್ದ ಶತಮಾನದಷ್ಟು ಹಳೆಯದಾದ ತೂಗು ಸೇತುವೆ ಕುಸಿತದಲ್ಲಿ ಸಾವಿನ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.
ಐದು ದಿನಗಳ ಹಿಂದೆ ತೂಗು ಸೇತುವೆಯನ್ನು ದುರಸ್ತಿ ಮತ್ತು ನವೀಕರಣಗೊಳಿಸಿ ಜನರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಾನುವಾರ ಸಂಜೆ 6.30ರ ಸುಮಾರಿಗೆ ಸೇತುವೆಯ ಮೇಲೆ ಜನಸಂದಣಿ ಹೆಚ್ಚಿದ್ದರಿಂದ ಸೇತುವೆ ಕುಸಿದಿದೆ. ಪರಿಣಾಮ ಇದುವರೆಗೆ 141 ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.
ತೂಗು ಸೇತುವೆಗೆ ಹಾಕಲಾಗಿದ್ದ ಕೇಬಲ್ ಗಳು ತುಂಡಾಗಿದ್ದು ಸೇತುವೆಯ ಅವಶೇಷಗಳು ನದಿಗೆ ಬಿದ್ದುಹೋಗಿವೆ. ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳೆ ಹೆಚ್ಚಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು ಅಗ್ನಿಶಾಮಕ ದಳ ಮತ್ತು ಎನ್.ಡಿ.ಆರ್.ಎಫ್ ತಂಡಗಳು ಭರದ ಕಾರ್ಯಾಚರಣೆ ಮುಂದುವರಿಸಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪಂಚಾಯತ್ ರಾಜ್ ಸಚಿವ ಬ್ರಿಜೇಶ್ ಮೆರ್ಜಾ ತಿಳಿಸಿದ್ದಾರೆ.
ಸೇತುವೆ ಕುಸಿತದಲ್ಲಿ ಮೃತಪಟ್ಟಿರುವವರ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಸರ್ಕಾರ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಸೇತುವೆ ಕುಸಿತದ ಸಂದರ್ಭ ನೀರಿನಲ್ಲಿ ನಾಪತ್ತೆಯಾಗಿರುವವರ ಬಗ್ಗೆ ಶೋಧ ಕಾರ್ಯ ನಡೆಸಿ ಹೊರತರಬೇಕು. ಮೃತರು ಮತ್ತು ಗಾಯಗೊಂಡಿರುವ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.