ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ ಜೋಡೋ ಯಾತ್ರೆ ಕೇವಲ ನಾಟಕ, ಪಾತ್ರಧಾರಿಗಳು ಅಧಿಕಾರದಲ್ಲಿ ಇದ್ದಾಗ ಏನು ಮಾಡುತ್ತಿದ್ದರು, ವಾಲ್ಮೀಕಿ ಸಮುದಾಯದ ಮತ ಪಡೆದು ಮೀಸಲಾತಿ ಕೊಡದೇ ವಂಚಿಸಿ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ, ಇವರಿಗೆ ತಕ್ಕ ಪಾಠ ಕಲ್ಪಿಸಬೇಕಿದೆ ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಿಂದುಳಿದ ವರ್ಗದವರ ಹೆಸರು ಹೇಳಿಕೊಂಡು ಅಧಿಕಾರ ಪಡೆದು ಮೋಸ ಮಾಡಿದರು. ಆದರೆ ಬಿಜೆಪಿ ಮೀಸಲಾತಿ ಹೆಚ್ಚಳದಂತಹ ಕಾರ್ಯವನ್ನು ಮಾಡಿದೆ, ಬೇರೆ ಪಕ್ಷಗಳಲ್ಲಿ ಇರುವ ವಾಲ್ಮೀಕಿ ಸಮುದಾಯದ ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಬೇಕೆಂದು ಮನವಿ ಮಾಡಿದರು.
ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿರುವುದಕ್ಕೆ ಬಳ್ಳಾರಿಯಲ್ಲಿ ನ.20ರಂದು ಎಸ್ಟಿ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದೆ, ಅದರಂತೆ ಸರ್ಕಾರ ಮೀಸಲಾತಿಯನ್ನು ಹೆಚ್ಚಿಸಿದೆ, ಸ್ವಾತಂತ್ರ್ಯ ಬಂದಾಗಿನಿಂದಲು ಶೇ.3ರಷ್ಟಿದ್ದ ಮೀಸಲಾತಿಯನ್ನು ಕಾಂಗ್ರೆಸ್ ಏಕೆ ಹೆಚ್ಚಳ ಮಾಡಲಿಲ್ಲ. ಮೊದಲಿನಿಂದಲೂ ನಾನು ಸಮುದಾಯ ಪರ ರಾಜಕಾರಣಿ ಎಂದು ಹೇಳಿದರು.
ನಾಲ್ಕು ದಶಕಗಳಿಂದ ನಡೆಯುತ್ತಿದ್ದ ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಒಪ್ಪಿಗೆ ಸೂಚಿಸಿರುವ ಸಿಎಂ ಅವರಿಗೆ ವಾಲ್ಮೀಕಿ ಸಮುದಾಯ ಕೃತಜ್ಞತೆ ಸಲ್ಲಿಸಬೇಕಿರುವುದು ನಮ್ಮ ಕರ್ತವ್ಯ, ಮೀಸಲಾತಿ ಹೆಚ್ಚಳವಾಗುವುದಿಲ್ಲ ಎಂದು ವಿರೋಧ ಪಕ್ಷಗಳ ಮುಖಂಡರು ಹೇಳಿದ್ದರು ಆದರೆ ಇಂದು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲಾಯಿತು ಎಂದರು.