ದಕ್ಷಿಣ ಬಿಹಾರದ ಔರಂಗಬಾದ್ ಜಿಲ್ಲಾ ಕೇಂದ್ರದ ಜನದಟ್ಟಣೆ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಐವರು ಪೊಲೀಸ್ ಸಿಬ್ಬಂದಿ ಸೇರಿ ಕನಿಷ್ಠ 25 ಮಂದಿ ಗಾಯಗೊಂಡಿದ್ದಾರೆ.
ಔರಂಗಾಬಾದ್ ಪಟ್ಟಣದ ಶಹಗಂಜ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಛತ್ತ ಪೂಜೆ ಪ್ರಸಾದ ತಯಾರಿ ನಡೆಯುತ್ತಿದ್ದಾಗ ಮನೆಯೊಳಗೆ ಎಲ್.ಪಿ.ಜಿ ಸಿಲಿಂಡರ್ ಸ್ಪೋಟಗೊಂಡಿದೆ ಎಂದು ಟೌನ್ ಪೊಲೀಸ್ ಠಾಣೆಯ ಪ್ರಭಾರಿ ಸಬ್ ಇನ್ಸ್ ಪೆಕ್ಟರ್ ವಿನಯ್ ಕುಮಾರ್ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮನೆಯ ಮಾಲಿಕ ಅನಿಲ್ ಗೋಸ್ವಾಮಿ ಅವರ ಪ್ರಕಾರ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗಲು ಪ್ರಾರಂಭಿಸಿತು. ಸ್ಥಳಿಯ ನಿವಾಸಿಗಳು ತೆರವುಗೊಳಿಸುವ ಮೊದಲು ಅದು ಬೆಂಕಿಗೆ ಆಹುತಿಯಾಗಿದೆ ಎಂದು ಹೇಳಿದ್ದಾರೆ.
ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ಮಹಿಳಾ ಪೇದೆ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


