ತುಮಕೂರಿನಲ್ಲಿ ಮೊಟ್ಟಮೊದಲ ಬಾರಿಗೆ ಬಾಂಗ್ಲಾ ದೇಶದ 9 ವರ್ಷದ ಕೌಶಿಕ್ ಬರ್ಮನ್ ಎಂಬ ಬಾಲಕನಿಗೆ ಸಂಕೀರ್ಣ ಕಾಂಜೆನೈಟಲ್ ಸಮಸ್ಯೆಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಅಂತಾರಾಷ್ಟ್ರೀಯ ಮೈಲಿಗಲ್ಲು ದಾಟಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಜಿ.ಪರಮೇಶ್ವರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷದ ಹಿಂದೆ ಆರಂಭಗೊಂಡ ಶ್ರೀಸಿದ್ದಾಥ್ ಅಡ್ವಾನ್ಡ್ಸ್ ಹಾರ್ಟ್ ಸೆಂಟರ್ 1000ಕ್ಕೂ ಹೆಚ್ಚು ಕಾರ್ಡಿಯಾಲಜಿ ಪ್ರೊಸೀಜರ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 130ಕ್ಕೂ ಹೆಚ್ಚು ಹೃದ್ರೋಗ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಲಾಗಿದೆ. ಇದೀಗ ಆಸ್ಪತ್ರೆಯಲ್ಲಿ ವಿದೇಶಿ ರೋಗಿಯೊಬ್ಬರಿಗೆ ಅತ್ಯುತ್ತಮ ಚಿಕಿತ್ಸೆ ನೀಡಿದ ವೈದ್ಯರ ತಂಡ ಗಮನಾರ್ಹ ಮೈಲಿಗಲ್ಲಿನತ್ತ ದಾಪುಗಾಲು ಹಾಕಿದೆ. ಆ ಮೂಲಕ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಾಟಿಯಾಗಬಲ್ಲ ಆಧುನಿಕ ಉಪಕರಣಗಳ ಅಳವಡಿಕೆ,ತಜ್ಞ-ನುರಿತ ವೈದ್ಯರ ತಂಡ ತುಮಕೂರಿನಲ್ಲಿದೆ ಎಂಬುದು ಸಾಬೀತಾಗಿದೆ ಎಂದರ.
ಸಿದ್ದಾರ್ಥ ವೈದ್ಯಕೀಯ ಕಾಲೇಜು ಪೊಲೀಸ್, ಆಗ್ನಿಶಾಮಕದಳ, ಹೆಚ್.ಎ.ಎಲ್. ಜೊತೆ ಒಪ್ಪಂದ ಮಾಡಿಕೊಂಡು ಅವರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿದೆ. ಕೈಗಾರಿಕಾ ಹಬ್ ಆಗಿರುವ ತುಮಕೂರಿನ ವಸಂತನರಸಾಪುರದಲ್ಲಿ ಜಾಗ ನೀಡಿದರೆ ಆಸ್ಪತ್ರೆ ತೆರೆದು ಕಾರ್ಮಿಕರಿಗೆ, ಅವರ ಕುಟುಂಬದವರಿಗೆ ವೈದ್ಯಕೀಯ ಸೇವೆ ಒದಗಿಸಲು ಸಿದ್ದವಿದೆ ಪರಮೇಶ್ವರ್ ತಿಳಿಸಿದರು.
ಸಿದ್ದಾರ್ಥ ಅಡ್ವಾನ್ಡ್ಸ್ ಹಾರ್ಟ್ ಸೆಂಟರ್ ನ ತಜ್ಞ ವೈದ್ಯ ಡಾ.ತಮೀಮ್ ಮಾತನಾಡಿ, ಬಾಲಕನ ತಂದ ಬಿಪುಲ್ ಬರ್ಮನ್ ಅವರು ಕೃಷಿಕರಾಗಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗದರಾಗಿದ್ದಾರೆ. ತಮ್ಮ ಗ್ರಾಮದ ಹಿರಿಯೊಬ್ಬರ ಮಾರ್ಗದರ್ಶನದಲ್ಲಿ ಬೆಂಗಳೂರಿಗೆ ಬಂದ ಇವರಿಗೆ ತುಮಕೂರಿನ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ನಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ದೊರೆತ ನಂತರ ನಮ್ಮ ಸಂಪರ್ಕ ಪಡೆದುಕೊಂಡು ತಮ್ಮ ಪುತ್ರನ ಹೃದಯರೋಗದ ಮೂಲವನ್ನು ಪತ್ತೆ ಮಾಡಿಕೊಂಡಿದ್ದಾರೆ.
ಕೌಶಿಕ್ ಬರ್ಮನ್ಗೆ 2 ವರ್ಷವಿರುವಾಗಲೇ ಕಾಂಜೆನೈಟಲ್ ಹೃದಯ ರೋಗಕ್ಕೆ ತುತ್ತಾಗಿದ್ದ. ಆದರೆ ಚಿಕಿತ್ಸೆ ಪಡೆದುಕೊಂಡಿರಲಿಲ್ಲ. ಸಮಸ್ಯೆ ಉಲ್ಬಣಗೊಂಡಿದ್ದರ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಾದಾಗ ರೋಗದ ಸಂಕೀರ್ಣತೆ ಮತ್ತು ತೀಕ್ಷ್ಣತೆಯನ್ನು ಅರಿತ ನುರಿತ ವೈದ್ಯರ ತಂಡ ಬಾಲಕನಿಗೆ ಒಟ್ಟು 30 ದಿವಸಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿದ್ದು, ಈಗ ಚೇತರಿಸಿಕೊಂಡಿದ್ದಾನೆ ಎಂದರು.
ಹೃದಯ, ಶ್ವಾಸಕೋಶ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಅತ್ಯಾಧುನಿಕ ಯಂತ್ರ, ವೈದ್ಯಕೀಯ ಸಾಧನಗಳನ್ನು ಬಳಸಿ ನಡೆಸಲಾದ ಅಪರೂಪದ ಶಸ್ತ್ರಚಿಕಿತ್ಸೆ ಇದಾಗಿದೆ.ಮಕ್ಕಳ ಹೃದಯರೋಗ ಶಸ್ತ್ರಚಿಕಿತ್ಸೆಯನ್ನು ಸಮರ್ಥವಾಗಿ ಮಾಡುವ ಮೂಲಕ ತುಮಕೂರಿನಂತಹ ಪ್ರದೇಶದಲ್ಲಿ ಸೂಕ್ಷ್ಮ ರೀತಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಬಹುದೆಂಬುದನ್ನು ತಮ್ಮ ವೈದ್ಯರ ತಂಡ ಈ ಪ್ರಕರಣದ ಮೂಲಕ ಸಾಬೀತು ಪಡಿಸಿದೆ ಎಂದು ಡಾ.ತಮೀಮ್ಅಹಮ್ಮದ್ ನುಡಿದರು.