ನವೀನ್ ಸೂರಂಜೆ
ಹೆಡ್ ಬುಷ್ ಸಿನೇಮಾದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಹಿಂದುತ್ವವಾದಿಗಳು ಹುಯಿಲೆಬ್ಬಿಸಿದ್ದಾರೆ. ಅದೇ ಹಿಂದುತ್ವವಾದಿಗಳು ಕಾಂತಾರ ಸಿನೇಮಾವು ನಮ್ಮ ಸಂಸ್ಕೃತಿ ಆರಾಧನೆಯನ್ನು ಬಿಂಬಿಸುವ ಚಿತ್ರವೆಂದು ಸಂಭ್ರಮಪಡುತ್ತಾರೆ.
ಕಾಂತಾರದಲ್ಲಿ ಒಂದು ದೃಶ್ಯವಿದೆ. ಪಂಜುರ್ಲಿ ಕೋಲ ನಡೆಯುತ್ತಿರುವಾಗ ಊರ ಮುಖ್ಯಸ್ಥನ ಮಗ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುತ್ತಾನೆ. ದೈವ ಬಂದಾಗ ಎದ್ದೂ ನಿಲ್ಲಲ್ಲ. ಸಾಲದ್ದಕ್ಕೆ “ಇದು ದೈವ ಮಾತಾಡೋದಾ ? ದೈವ ಪಾತ್ರಿ ಮಾತಾಡೋದಾ ?” ಎಂದು ಪ್ರಶ್ನೆ ಮಾಡುತ್ತಾನೆ. ಇದು ದೈವಗಳಿಗೆ ಮಾಡುವ ಅವಮಾನ ಅಲ್ಲವೇ ?
ಮತ್ತೊಂದು ದೃಶ್ಯದಲ್ಲಿ ಸತ್ತು ಬಿದ್ದಿದ್ದಾನೆ ಎಂದುಕೊಂಡ ಹೀರೋ ಶಿವನ ಮೇಲೆ ಗುಳಿಗ ದೈವ ಬರುತ್ತದೆ. ಯಾವುದೇ ದೈವ ಯಾವುದೇ ವ್ಯಕ್ತಿಯ ಮೈಮೇಲೆ ಬರಬೇಕಾದರೆ ಊರ ಸಮಸ್ತರು ಸೇರಿ ಆ ವ್ಯಕ್ತಿಗೆ ಎಣ್ಣೆಬೂಳ್ಯ ಕೊಡಬೇಕು. ಎಣ್ಣೆ ಬೂಳ್ಯ ಕೊಟ್ಟ ನಂತರ ಅದನ್ನು ಪಡೆದುಕೊಂಡ ಪಾತ್ರಿ ಊರ ಸಮಸ್ತ ಜಾತಿಗಳನ್ನು ಕರೆದು ಒಪ್ಪಿಗೆ ಪಡೆದುಕೊಂಡು ದೈವವನ್ನು ತನ್ನ ಮೈಮೇಲೆ ಆವಾಹಿಸಿಕೊಳ್ಳಬೇಕು. ಬಿದ್ದ ವ್ಯಕ್ತಿ ಮೇಲೆ ಏಕಾಏಕಿ ಗುಳಿಗ ದೈವ ಬರುವುದು ದೈವಕ್ಕೆ ಮಾಡಿದ ಅವಮಾನ ಅಲ್ಲವೇ ? ಗುಳಿಗ ಮೈಮೇಲೆ ಬಂದ ಮೇಲೂ ದೈವದ ಮೇಲೆ ಗೂಂಡಾಗಳು ದಾಳಿ ಮಾಡುತ್ತಾರೆ. ದೈವದ ಮೇಲೆ ಒದೆಯುತ್ತಾರೆ. ಒಬ್ಬನಂತೂ ಗುಳಿಗ ದೈವವನ್ನು ಕುತ್ತಿಗೆ ಹಿಡಿದು ಮೇಲೆತ್ತುತ್ತಾನೆ. ಇದ್ಯಾವುದೂ ಗುಳಿಗ ದೈವಕ್ಕೆ ಮಾಡಿದ ಅವಮಾನ ಆಗುವುದಿಲ್ಲ.
ವಾಸ್ತವವಾಗಿ ರಿಷಬ್ ಶೆಟ್ಟಿ ಸಿನೇಮಾದಲ್ಲಿ ದೈವಾರಾಧನೆಗೆ ಅವಮಾನ ಮಾಡಿಲ್ಲ. ಪಾತ್ರಗಳು ಮಾತಾನಾಡಿವೆ ಅಷ್ಟೆ. ರಿಷಬ್ ಶೆಟ್ಟಿ ದೈವಾರಾಧನೆಯನ್ನು ರಾಜಕೀಯವಾಗಿ, ಸೈದ್ದಾಂತಿಕವಾಗಿ ದುರುಪಯೋಗ ಪಡಿಸಿಕೊಂಡಿದ್ದಾರಷ್ಟೆ.
ಅದೇ ರೀತಿ ಡಾಲಿ ಧನಂಜಯ್ ಅಭಿನಯಿಸಿರುವ ಹೆಡ್ ಬುಷ್ ಸಿನೇಮಾದಲ್ಲಿ ಪಾತ್ರ- ಪಾತ್ರಗಳು ಮಾತಾಡಿವೆಯಷ್ಟೆ. ಆದರೆ ಅಂಬೇಡ್ಕರ್, ಕುವೆಂಪು, ಬಸವಣ್ಣ ಅನುಯಾಯಿಯಾಗಿರುವ ಡಾಲಿ ಧನಂಜಯ್ ವೀರಗಾಸೆ ಮತ್ತು ಕರಗಕ್ಕೆ ಅವಮಾನ ಮಾಡಿದ್ದಾರೆ ಎಂದು ಹಿಂದುತ್ವವಾದಿಗಳು ಅರಚಾಡುತ್ತಿದ್ದಾರೆ. ಹಿಂದುತ್ವವಾದಿಗಳು ಮಾಡಿದರೆ ಅದು ಸಂಸ್ಕೃತಿಯ ಪ್ರತಿಪಾದನೆ. ಮನುಷ್ಯ ಪ್ರೇಮಿಗಳು ಮಾಡಿದರೆ ಅದು ಧರ್ಮದ್ರೋಹ.
ಲೇಖಕರು: ಪತ್ರಕರ್ತರು