ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯೊಬ್ಬರ ಮೇಲೆ ಸಚಿವ ವಿ.ಸೋಮಣ್ಣ ಹಲ್ಲೆ ನಡೆಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯ ಅಹವಾಲು ಕೇಳದೆ ಆಕೆಯ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಹಲವರು ಸಾಮಾಜಿಕ ಜಾಲ ತಾಣದಲ್ಲಿ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಶ್ರೀಪಾದ ಭಟ್ ನೆರವು ಕೇಳಿ ಬಂದ ಅಸಹಾಯಕ ಮಹಿಳೆಗೆ ಸಚಿವ ಸೋಮಣ್ಣ ಕೆನ್ನೆಗೆ ಬಾರಿಸಿ ಹಲ್ಲೆ ನಡೆಸಿದ ಸಾಕ್ಷಿಯಾಗಿ ವಿಡಿಯೋ ದಾಖಲೆಯಿದೆ. ಆದರೆ ಅಸಹಾಯಕ ಸಂತ್ರಸ್ತರಿಗೆ ಬೆದರಿಕೆ ಹಾಕಿ ವ್ಯತಿರಿಕ್ತವಾದ ಹೇಳಿಕೆ ಕೊಡಿಸಿದ್ದಾರೆ ಎಂದು ಹೇಳಿದ್ದಾರೆ.
ಸ್ಥಳೀಯ ಸಂಘಟನೆಗಳು ಮುಂದೆ ಬಂದು ಸಂತ್ರಸ್ತರಿಗೆ ಸಾಂತ್ವನ, ಧೈರ್ಯ ತುಂಬಿದರೆ ಸೋಮಣ್ಣನವರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಬಹುದು ಮತ್ತು ಶೋಷಿತರಿಗೆ ನ್ಯಾಯ ಒದಗಿಸಬಹುದು. ಆದರೆ ಪರಿಸ್ಥಿತಿ ಸರಳವಾಗಿಲ್ಲವಲ್ಲ? ಏನು ಮಾಡಬಹುದು? ಎಂದು ಭಟ್ ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಮಹಿಳೆಯ ಮೇಲೆ ಸಚಿವ ಸೋಮಣ್ಣ ಹಲ್ಲೆ ನಡೆಸಿರುವುದು ತೀವ್ರವಾಗಿ ಖಂಡಿಸಿದ್ದಾರೆ.
ಗುಂಡ್ಲುಪೇಟೆಯ ಅಂಗಳದಲ್ಲಿ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯೊಬ್ಬರ ಮೇಲೆ ಸಚಿವ ಸೋಮಣ್ಣ ಕಪಾಳಮೋಕ್ಷ ಮಾಡಿದ್ದಾರೆ. ಸೋಮಣ್ಣ ಒಬ್ಬ ಹಿರಿಯ ಸಚಿವ. ನಾಲ್ಕು ಜನರಿಗೆ ಬುದ್ಧಿ ಹೇಳುವ ಸ್ಥಾನದಲ್ಲಿದ್ದು ಈ ರೀತಿ ವರ್ತಿಸುವುದು ಶೋಭೆಯಲ್ಲ. ಸ್ತ್ರೀಯರೊಂದಿಗೆ ಸಂಸ್ಕಾರಯುತವಾಗಿ ವರ್ತಿಸಬೇಕು ಅನ್ನೋ ಕನಿಷ್ಠ ಜ್ಞಾನವೂ ಸೋಮಣ್ಣರಗಿಲ್ಲವೇ.? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ತ್ರೀ ನಿಂದನೆ, ಸ್ತ್ರೀ ಪೀಡನೆ, ಸ್ತ್ರೀ ಶೋಷಣೆ BJPಯವರ ಹುಟ್ಟುಗುಣ. ಮಹಿಳೆಯ ಕೆನ್ನೆಗೆ ಹೊಡೆಯುವ ಮೂಲಕ ಸ್ತ್ರೀಯರ ಬಗ್ಗೆ BJPಯವರ ಮನಸ್ಥಿತಿಯನ್ನು ಸೋಮಣ್ಣ ಅನಾವರಣ ಮಾಡಿದ್ದಾರೆ. ಸಾರ್ವಜನಿಕವಾಗಿಯೇ ಸೋಮಣ್ಣ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಸ್ತ್ರೀಯರ ಬಗ್ಗೆ ಗೌರವವಿಲ್ಲದ ವ್ಯಕ್ತಿಗಳಿಂದ ಮಾತ್ರ ಇಂತಹ ವರ್ತನೆ ತೋರಿಸಲು ಸಾಧ್ಯ ಎಂದು ಹೇಳಿದ್ದಾರೆ.
ಘಟನೆಯ ಬಳಿಕ ಹಲ್ಲೆಗೊಳಗಾದ ಮಹಿಳೆಯಿಂದ ಸ್ಪಷ್ಟನೆಯನ್ನು ಕೊಡಿಸಿದ್ದು, ನನ್ನ ಮೇಲೆ ಸೋಮಣ್ಣ ಹಲ್ಲೆ ಮಾಡಿಲ್ಲ ಎಂದು ಸಂತ್ರಸ್ತ ಅಸಹಾಯಕ ಮಹಿಳೆ ಹೇಳಿದ್ದಾರೆ.