ಕಾನೂನು ಉಲ್ಲಂಘನೆ ಆರೋಪದ ಮೇಲೆ ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಸರ್ಕಾರೇತರ ಸಂಸ್ಥೆ ರಾಜೀವ್ ಗಾಂಧಿ ಫೌಂಡೇಶನ್ ನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2020ರಲ್ಲಿ ಗೃಹ ಸಚಿವಾಲಯವು ರಚಿಸಿದ ಅಂತರ ಸಚಿವಾಲಯ ಸಮಿತಿಯು ನಡೆಸಿದ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ರಾಜೀವ್ ಗಾಂಧಿ ಪ್ರತಿಷ್ಠಾನದ ಎಫ್.ಸಿ.ಆರ್.ಎ ಪರವಾನಗಿಯನ್ನು ಅದರ ವಿರುದ್ಧದ ತನಿಖೆಯ ನಂತರ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರ್.ಜಿ.ಎಫ್ ನ ಅಧ್ಯಕ್ಷರಾಗಿದ್ದಾರೆ. ಇತರ ಟ್ರಸ್ಟಿಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಸೇರಿದ್ದಾರೆ.
1991ರಲ್ಲಿ ಆರ್.ಜಿ.ಎಫ್ ಸ್ಥಾಪಿಸಲಾಗಿದ್ದು ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಮಹಿಳೆಯರು ಮತ್ತು ಮಕ್ಕಳು, ಅಂಗವೈಕಲ್ಯ ಬೆಂಬಲ ಇತ್ಯಾದಿ ಸೇರಿದಂತೆ ಹಲವಾರು ನಿರ್ಣಾಯಕ ವಿಷಯಗಳ ಮೇಲೆ ಕೆಲಸ ಮಾಡಿದೆ ಎಂದು ಮಾಧ್ಯಮಗಳು ತಿಳಿಸಿವೆ.
ಸೋನಿಯಾ ಗಾಂಧಿ ನೇತೃತ್ವದ 2 ಎನ್.ಜಿ.ಓಗಳ ಎಫ್.ಸಿ.ಆರ್.ಎ ಪರವಾನಗಿಯನ್ನು ಗೃಹ ಸಚಿವಾಲಯ ರದ್ದುಗೊಳಿಸಿದೆ. ರಾಜೀವ್ ಗಾಂಧಿ ಫೌಂಡೇಶನ್ ಮತ್ತು ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ಗಳನ್ನು ರದ್ದುಪಡಿಸಿದ್ದು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಪರವಾನಗಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ.
ಈ ಎನ್.ಜಿ.ಓಗಳ ವಿರುದ್ಧ ತನಿಖೆಯ ನಂತರ ರಾಜೀವ್ ಗಾಂಧಿ ಫೌಂಡೇಶನ್ ಮತ್ತು ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ನ ಎಫ್.ಸಿ.ಆರ್.ಎ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖಾಧಿಕಾರಿಗಳು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ದಾಖಲೆಗಳ ದುರ್ಬಳಕೆ, ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ಚೀನಾ ಸೇರಿದಂತೆ ವಿದೇಶಗಳಿಂದ ಹಣವನ್ನು ಸ್ವೀಕರಿಸುವಾಗ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.