ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳನ್ನು ಕಲ್ಪಿಸಲು ಮಕ್ಕಳ ಪೋಷಕರಿಂದ ಮಾಸಿಕ 100 ರೂಪಾಯಿ ದೇಣಿಗೆ ಪಡೆಯುವ ಸಂಬಂಧ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆದೇಶ ಹಿಂಪಡೆಯುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು ಈ ಕುರಿತು ಮತ್ತೊಂದು ಆದೇಶ ಹೊರಡಿಸಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಅಕ್ಟೋಬರ್19ರಂದು ಆದೇಶವನ್ನು ಹೊರಡಿಸಿ ನಮ್ಮ ಶಾಲೆ, ನನ್ನ ಕೊಡುಗೆ ಎಂಬ ಯೋಜನೆಯೊಂದನ್ನು ಘೋಷಿಸಿದ್ದರು.
ಪೋಷಕರಿಂದ ಬರುವ ಹಣದಲ್ಲಿ ಶೌಚಾಲಯಗಳ ಸ್ವಚ್ಚತೆ, ಕುಡಿಯುವ ನೀರು ಒದಗಿಸುವುದು, ಗಣಕ ಯಂತ್ರಗಳ ರಿಪೇರಿ, ಅತಿಥಿ ಶಿಕ್ಷಕರಿಗೆ ಗೌರವ ಧನ ಸೇರಿದಂತೆ ಮೊಲದ ಮತ್ತು ಎರಡನೇ ಆದ್ಯತೆಯಲ್ಲಿ ವೆಚ್ಚ ಮಾಡಿದ ಸುಮಾರು 17 ಅಗತ್ಯಗಳಿಗೆ ಎಸ್.ಡಿ.ಎಂಸಿಗಳು ದೇಣಿಗೆ ಸಂಗ್ರಹ ಮಾಡಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು.
ರಾಜ್ಯ ಸರ್ಕಾರ ಹೊರಡಿಸಿದ್ದ ಈ ಆದೇಶಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ಮತ್ತು ಖಂಡನೆ ವ್ಯಕ್ತವಾಗಿತ್ತು. ಸಾರ್ವಜನಿಕರ ವಿರೋಧಕ್ಕೆ ಮಣಿದ ಸರ್ಕಾರ ಹಿಂದಿನ ಆದೇಶವನ್ನು ವಾಪಸ್ ಪಡೆದು ಹೊಸ ಆದೇಶವನ್ನು ಹೊರಡಿಸಿದೆ.