26 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಮೇಲೆ 10 ಮಂದಿ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್ ನ ಪಶ್ಚಿಮ ಸಿಂಗ್ ಭೂಮ್ ಜಿಲ್ಲೆಯಲ್ಲಿ ನಡೆದಿದೆ.
ಪ್ರಸಿದ್ದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಇಲ್ಲಿಗೆ ಬಂದಿದ್ದಾರೆ. ಗುರುವಾರ ಸಂಜೆ ದ್ವಿಚಕ್ರ ವಾಹನದಲ್ಲಿ ತನ್ನ ಗೆಳೆಯನೊಂದಿಗೆ ಹೊರಟಿದ್ದಾಗ ಚೈಬಾಸಾದ ಹಳೆಯ ಏರೋಡ್ರೋಮ್ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಟು-ಹತ್ತು ಪುರುಷರ ಗುಂಪು ದಂಪತಿಯನ್ನು ತಡೆದು ಗೆಳೆಯನಿಗೆ ಥಳಿಸಿತ್ತು ಮತ್ತು ಮಹಿಳೆಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ನಂತರ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಕುರಿತು ಮುಫಸಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆಯ ಹಿಂದಿರುವವರನ್ನು ಗುರುತಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಶುತೋಷ್ ಶೇಖರ್ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಬಳಿಕ ಆರೋಪಿಗಳು ಆಕೆಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು ಜೊತೆಗೆ ಆಕೆಯ ಕೈಚೀಲ ಮತ್ತು ಮೊಬೈಲ್ ಪೋನನ್ನು ತೆಗೆದುಕೊಂಡು ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 12 ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.